ಆಲೂರು ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ರೇಣುಕ ಪ್ರಸಾದ್, ಡಿ.ಎಸ್.ಜಯಣ್ಣ, ಅಜಿತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಬಿಇಒ ಕೃಷ್ಣೇಗೌಡ ಇತರರು ಇದ್ದರು.
- ತಹಸೀಲ್ದಾರ್ ಮಲ್ಲಿಕಾರ್ಜುನ್ ಬಣ್ಣನೆ
ಆಲೂರು : ಕಾಯಕ ತತ್ವದ ಮೂಲಕ 12ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಿಸಿದ ಮಹಾನ್ ಜ್ಞಾನಿ ಬಸವಣ್ಣ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಬಣ್ಣಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣ ಅವರು ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಸಾರಿ ಮಾದರಿಯಾದರು. ಅವರ ತತ್ವ, ವಚನಗಳು ಸಾರ್ವಕಾಲಿಕ ಮೌಲ್ಯಗಳಾಗಿದ್ದು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು. 12ನೇ ಶತಮಾನ ತನ್ನದೇ ಆದ ಮಹತ್ವ ಪಡೆದಿದ್ದು ಜಗಜ್ಯೋತಿ ಬಸವೇಶ್ವರರು ಸರಳ ವಚನಗಳ ಮುಖಾಂತರ ಸಮಾಜದಲ್ಲಿರುವ ಅನಿಷ್ಟಗಳ ನಿರ್ಮೂಲನೆಗೆ ಪ್ರಯತ್ನಿಸಿದರು, ಎಲ್ಲ ವರ್ಗಗಳ ಜನರಲ್ಲಿ ಸಮಾನತೆ ತರಲು ಹಗಲಿರಳು ಶ್ರಮಿಸಿದ್ದರು ಎಂದು ತಿಳಿಸಿದರು.
ಶಿಕ್ಷಕ ಇಂದ್ರೇಶ್ ವೇರ್ವೆ ಮಾತನಾಡಿ, ವಿಶ್ವಗುರು ಬಸವಣ್ಣ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವುದಲ್ಲದೆ, ಕಾಯಕ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಕಾಯಕವೇ ಕೈಲಾಸ ಎಂಬ ಬಸವಣ್ಣ ಅವರ ತತ್ವ ಅನುಷ್ಠಾನಗೊಳ್ಳವುದು. ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಜಾತಿ, ಲಿಂಗ ಭೇದವಿಲ್ಲದೆ ಎಲ್ಲ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಒಗ್ಗೂಡಿ ವಚನಗಳ ಮೂಲಕ ಸಾಮಾಜಿಕ ಸಮಾನತೆ ಹಾಗೂ ಕಾಯಕ ತತ್ವವನ್ನು ಚರ್ಚಿಸಲು ಪ್ರಯತ್ನಿಸಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ. ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಲು, ಲಿಂಗ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಬಸವಣ್ಣ ಅವರು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ರಾಜಪ್ಪ ಬಡಾವಣೆಯ ನಿವಾಸಿ ವಿರೂಪಾಕ್ಷಯ್ಯ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಿಂದ ಅಸಮಾಧಾನ : ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಚರಿಸುವ ಕಾರ್ಯಕ್ರಮಗಳಲ್ಲಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ಆದರೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ಮುಖಂಡರಿಂದ ವಿರೋಧ ವ್ಯಕ್ತವಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ಕುಮಾರ್, ಶಿರಸ್ತೇದಾರ್ ಅಂಕೇಗೌಡ, ತಾಲೂಕು ಪಂಚಾಯಿತಿ ಎಡಿ ಕೇಶವಮೂರ್ತಿ, ವೀರಶೈವ ಲಿಂಗಾಯತ ಸಂಘದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜು, ಸಹ ಕಾರ್ಯದರ್ಶಿ ಡಾ. ಜಯರಾಜ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಅಜಿತ್ ಸಿ, ಕಾರ್ಯದರ್ಶಿ ಚೇತನ್, ಹಿಂದುಳಿದ ವರ್ಗಗಳ ಜಿಲ್ಲಾ ಕಾರ್ಯಾಧ್ಯಕ್ಷ ಶಂಕರಾಚಾರ್ಯ ಇತರರು ಇದ್ದರು.