ತಾಲೂಕಿನ ಬಿಕ್ಕೋಡು ಸಮೀಪದ ಚಳ್ಳೇನಹಳ್ಳಿ ಗ್ರಾಮದ ಶ್ರೀ ಗುರು ಶನೈಶ್ಚರಸ್ವಾಮಿ ದೇವರ 31 ನೇ ವರ್ಷದ ಕೊಂಡೋತ್ಸವ ಹಾಗೂ ರಥೋತ್ಸವ ನೆರವೇರಿತು.
- ಕಂಡೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಜನರು
- ಗಮನ ಸೆಳೆದ ಪೌರಾಣಿಕ ನಾಟಕ
ಬೇಲೂರು: ತಾಲೂಕಿನ ಬಿಕ್ಕೋಡು ಸಮೀಪದ ಚಳ್ಳೇನಹಳ್ಳಿ ಗ್ರಾಮದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಶ್ರೀ ಗುರು ಶನೈಶ್ಚರಸ್ವಾಮಿ ದೇವರ 31ನೇ ವರ್ಷದ ಕೊಂಡೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ದಿವ್ಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತಾರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಶನೈಶ್ಚರಸ್ವಾಮಿ ದೇಗುಲದ ಪ್ರಧಾನ ಅರ್ಚಕ ಸಂದೀಪ್ ಸ್ವಾಮಿ ನೇತೃತ್ವದಲ್ಲಿ ಬಿಕ್ಕೋಡು ವಿರಕ್ತ ಮಠದ ಸಮೀಪದಿಂದ ಹುಸ್ಕೂರು, ಚಿಕ್ಕ ಬಿಕ್ಕೋಡು ಹಾಗೂ ಕೆಳ್ಳ ಬಿಕ್ಕೋಡು ಗ್ರಾಮಸ್ಥರು ಕಾಕಾ ವಾಹನ ಮತ್ತು ಅಡ್ಡ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ತಂದ ನಂತರ ದೇವರ ಕೊಂಡೋತ್ಸವ ಜರುಗಿತು. ನಂತರದಲ್ಲಿ ಪ್ರತಿ ವರ್ಷದಂತೆ ಬಕ್ರವಳ್ಳಿ ಕುಮಾರಯ್ಯ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಪೂಜೆ ಕೈಂಕಾರ್ಯಗಳು ನೆರವೇರಿಸಲಾಯಿತು.
ಮಧ್ಯಾಹ್ನ ಮದಘಟ್ಟ ವೃತ್ತದಿಂದ ದೇವರ ದಿವ್ಯ ರಥೋತ್ಸವ ಪ್ರಾರಂಭಗೊಂಡಿತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡು ರಥ ಎಳೆದು ದೇವರ ಕೃಪೆಗೆ ಪಾತ್ರರಾದರು.
ಸಂಜೆ ಕೊಂಡೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಕೃಷ್ಣಾಪುರ ಗ್ರಾಮಸ್ಥರು ರಾಜಾ ಸತ್ಯವೃತ ಅಥವಾ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕ ಅಭಿನಯಿಸಿ ಎಲ್ಲರ ಮನ ಗೆದ್ದರು.
ಪೌರಾಣಿಕ ನಾಟಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ದೇವರ ಮೇಲೆ ಭಕ್ತಿ ಇದ್ದಲ್ಲಿ ಮಾತ್ರ ನಾವು ಭಗವಂತನನ್ನು ಕಾಣಲು ಸಾಧ್ಯ. ಶನೈಶ್ಚರಸ್ವಾಮಿ ದೇವರು ಹಲವು ವರ್ಷಗಳಿಂದ ಈ ಭಾಗದ ಭಕ್ತರಲ್ಲಿ ಧಾರ್ಮಿಕ ಭಾವನೆ ಮೂಡಿಸುವುದಲ್ಲದೆ ಜನರ ಇಷ್ಟಾರ್ಥವನ್ನು ನೆರವೇರಿಸುವ ಶಕ್ತಿ ಕೇಂದ್ರವಾಗಿದೆ ಎಂದರು.
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಹಂತಹಂತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು ಹಿಂದಿನಿಂದಲೂ ಪೌರಾಣಿಕ ನಾಟಕಗಳು ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬರು ಇದನ್ನು ಕಲಿತು ನಟಿಸಿದರೆ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬಹುದು. ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಅಬ್ಬರಕ್ಕೆ ಸಿಲುಕಿ ಜನರಿಂದ ಮಾಯವಾಗುತ್ತಿರುವ ಸಂದರ್ಭ ನಮ್ಮ ಸಂಸ್ಕೃತಿ ಉಳಿವಿಗಾಗಿ ಬಣ್ಣ ಹಚ್ಚುವವನೆ ನಿಜವಾದ ಕಲಾವಿದ. ಅಂತವರನ್ನು ಪ್ರೋತ್ಸಾಹಿಸಬೇಕು ಎಂದರು.
ಶ್ರೀ ಗುರು ಶನೈಶ್ಚರಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ಅಪ್ಪಣ್ಣ, ಹೂವೇಶ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್.ದಾನಿ, ಬಿಜೆಪಿ ತಾಲೂಕು ಅಧ್ಯಕ್ಷ ಸಂಜು ಕೌರಿ. ಬಿಕ್ಕೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭರತ್, ಮುಖಂಡರಾದ ಬಸವರಾಜ, ನಟರಾಜ, ಹರೀಶ್ ಮೇಕೆದಾಟು, ಮಲ್ಲೇಶ್, ರಾಜು, ಈರಪ್ಪ, ಸುರೇಶ್, ಕುಮಾರ್ ಕೌರಿ, ಉಮೇಶ್ ಬಕ್ರವಳ್ಳಿ ಇದ್ದರು.