ಸಿಮೆಂಟ್ ಮಂಜು 
ಹಾಸನ

ಸರ್ಕಾರದ ಮುಖವಾಡ ಕಳಚಿದ ಗೃಹಲಕ್ಷ್ಮಿಹಗರಣ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಮುಖವಾಡ ಕಳಚಿದ ಗೃಹಲಕ್ಷ್ಮಿಹಗರಣ
  • ಶಾಸಕ ಸಿಮೆಂಟ್ ಮಂಜು ಟೀಕೆ
ಹಾಸನ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 225 ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಜಿ ವರದಿ ನೀಡಿರುವುದು ಸರ್ಕಾರದ ಮುಖವಾಡ ಕಳಚಿದಂತಾಗಿದೆ ಎಂದು ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಟೀಕಿಸಿದರು.
ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿರುವಂತೆ 1.24 ಕೋಟಿ ಮಹಿಳೆಯರಿಗೆ ಸೇರಬೇಕಾದ 2 ತಿಂಗಳ 5 ಸಾವಿರ ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಯಾವ ಖಾತೆಯಲ್ಲಿ 5 ಸಾವಿರ ಕೋಟಿ ರೂ.ಇದೆ ಎಂದು ತಿಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿದರು.
ಮೃತಪಟ್ಟ 1.06 ಲಕ್ಷ ಜನರ ಖಾತೆಗೆ 116 ಕೋಟಿ ರೂ.ಜಮಾ ಮಾಡಿರುವ ಸರ್ಕಾರಕ್ಕೆ ಜವಾಬ್ದಾರಿ ಇದೆಯೇ ಎಂದು ಪ್ರಶ್ನಿಸಿದ ಅವರು, ಇಂಥ ತಪ್ಪು ಕಂಡು ಹಿಡಿಯಲಾಗದ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸಮಿತಿಯನ್ನು ಕೂಡಲೇ ವಜಾ ಮಾಡಬೇಕೆಂದು ಒತ್ತಾಯಿಸಿದರು.
19 ಸಾವಿರಕ್ಕೂ ಹೆಚ್ಚು ಜನರಿಗೆ 60.70 ಕೋಟಿ ಡಬಲ್ ಪೇಪೆಂಟ್ ಮಾಡಿದ್ದು ತಾಂತ್ರಿಕ ದೋಷವೋ ಅಥವಾ ವ್ಯವಸ್ಥಿತ ಲೂಟಿಯೋ ಎಂಬುದನ್ನು ಬಹಿರಂಗ ಪಡಿಸಬೇಕು. ಹೆಸರೇ ಇಲ್ಲದ ಬ್ಯಾಂಕ್ ಖಾತೆಗಳಿಗೆ 46.65 ಕೋಟಿ ರೂ.ವರ್ಗಾವಣೆ ಮಾಡಿದ್ದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ದಾಖಲೆಗಳಿಲ್ಲದ ಖಾತೆಗಳಿಗೆ ಕೋಟ್ಯಂತರ ರೂ.ಪಾವತಿ ಮಾಡಲಾಗಿದೆ. ರಾಜ್ಯ ಹೈಕೋರ್ಟ್ ಸಹ ನೋಟೀಸ್ ಜಾರಿ ಮಾಡಿದೆ. ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಲೋಪ ಆಗಲು, ಅವ್ಯವಹಾರ ನಡೆಯಲು, ಸಾರ್ವಜನಿಕರ ತೆರಿಗೆ ಹಣ ವ್ಯಯವಾಗಲು ರಾಜ್ಯ ಸರ್ಕಾರ ಮತ್ತು ಅನುಷ್ಠಾನಕ್ಕಾಗಿ ನೇಮಕ ಮಾಡಿರುವ ಸಮಿತಿ ನಿರ್ಲಕ್ಷೃವೇ ಕಾರಣವಾಗಿದ್ದು, ಕೂಡಲೇ ಇದನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಅತ್ಯಾಧುನಿಕ ಯುಗದಲ್ಲಿ ಬಟನ್ ಒತ್ತಿದರೆ ಸಾಕು ಎಲ್ಲ ಮಾಹಿತಿ ಸಿಗಲಿವೆ. ಅಂತದ್ದರಲ್ಲಿ ಯೋಜನೆ ಲೋಪ ಕಂಡು ಹಿಡಿಯಲು ಮತ್ತೆ ಬಯೋಮೆಟ್ರಿಕ್ ಇತ್ಯಾದಿ ಅಡ್ಡಮಾರ್ಗ ಹಿಡಿದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸರ್ಕಾರವು ನಕಲಿ ಫಲಾನುಭವಿಗಳನ್ನು ತಡೆಯಲು ಎಲ್ಲ ಮಹಿಳೆಯರು ಕಡ್ಡಾಯವಾಗಿ ಹೊಸದಾಗಿ ಬಯೋ ಮೆಟ್ರಿಕ್(ಬೆರಳಚ್ಚು/ಕಣ್ಣಿನಸ್ಕ್ಯಾನ್) ಪರಿಶೀಲನೆ ಮಾಡಿಸಬೇಕು ಮತ್ತು ಮರು ಅರ್ಜಿ ಸಲ್ಲಿಸಬೇಕು ಎಂದು ಆದೇಶಿಸಿದೆ. ಈ ನಡೆಯಿಂದ ದುಡಿಯುವ ಮಹಿಳೆಯರಿಗೆ, ನಿತ್ಯ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ತೊಂದರೆ ಆಗಲಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ರಾಜ್‌ಕುಮಾರ್, ಅಮಿತ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಮತ್ತು ಜಿಲ್ಲಾ ವಕ್ತಾರ ಆರ್.ಮೋಹನ್ ಇದ್ದರು.