ಬಿಳಿಕಲ್ ಲಕ್ಷ್ಮಿ ರಂಗನಾಥ ಸ್ವಾಮಿಯವರ ಜಾತ್ರಾ ಮಹೋತ್ಸವ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಬಿಳಿಕಲ್ಲು ಲಕ್ಷ್ಮೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 12ಕ್ಕೆ ಮಿಥುನ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಆರಂಭವಾಯಿತು. ತಾಲೂಕಿನ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಪ್ರಾರ್ಥಿಸಿದರು. ಗೋವಿಂದಾ ಗೋವಿಂದಾ, ಲಕ್ಷ್ಮೀ ರಂಗನಾಥ ಸ್ವಾಮಿ ಗೋವಿಂದಾ ಎಂಬ ಘೋಷಣೆಯೊಂದಿಗೆ ಬ್ರಹ್ಮಸರ ಮೂಲೆಗೆ ರಥವನ್ನು ಎಳೆದು ತರಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ದೇವಾಲಯದ ಮುಂಭಾಗ ಬಗೆಬಗೆಯ ರೀತಿಯ ಪ್ರಸಾದ ಹಾಗೂ ತಂಪಾದ ಪಾನೀಯಗಳನ್ನು ವಿತರಿಸಿದರು.
ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಶ್ರೀ ಬಿಳಿ ಕಲ್ಲು ಲಕ್ಷ್ಮೀರಂಗನಾಥಸ್ವಾಮಿ ಕಮಿಟಿಯ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.