41ನೇ ನೇತ್ರದಾನ ಪಾಕ್ಷಿಕ ಜಾಥಾ ಕಾರ್ಯಕ್ರಮಕ್ಕೆ ಲಯನ್ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಮಹೇಶ್ ಚಾಲನೆ ನೀಡಿದರು. ಡಾ.ಬಿ.ಧರಣೇಶ್, ಡಾ.ಟಿ.ಎಚ್.ಹರೀಶ್, ಡಾ.ಎಸ್.ಸಿಂಧು, ವಿದ್ಯಾರ್ಥಿಗಳು ಇದ್ದರು.  
ಹಾಸನ

ನೇತ್ರದಾನದಿಂದ ಅಂಧರಿಗೆ ಜಗತ್ತು ನೋಡುವ ಭಾಗ್ಯ

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಮಹೇಶ್ ಹೇಳಿಕೆ
ಚನ್ನರಾಯಪಟ್ಟಣ: ಜನರಲ್ಲಿ ನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಮತ್ತು ಮರಣಾನಂತರ ನೇತ್ರದಾನ ಮಾಡಲು ಪ್ರೇರೇಪಿಸುವುದು ನೇತ್ರದಾನ ಪಾಕ್ಷಿಕದ ಉದ್ದೇಶವಾಗಿದೆ ಎಂದು ಲಯನ್ಸ್ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ ಚನ್ನರಾಯಪಟ್ಟಣ ಸಂಯುಕ್ತ ಆಶ್ರಯದಲ್ಲಿ 41ನೇ ನೇತ್ರದಾನ ಪಾಕ್ಷಿಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೇತ್ರದಾನದಿಂದ ಅಂಧರಿಗೆ ಜಗತ್ತನ್ನು ನೋಡುವ ಅವಕಾಶ ಲಭಿಸುತ್ತದೆ. ಆದರೆ, ಸಾಮಾಜಿಕ ಮತ್ತು ಧಾರ್ಮಿಕ ಸಾಂಪ್ರದಾಯಿಕ ಕಟ್ಟುಪಾಡುಗಳು, ಭಯ ಮತ್ತು ಹಲವು ಗೊಂದಲದಿಂದಾಗಿ ಜನರು ನೇತ್ರದಾನ ಮಾಡಲು ಹಿಂದೇಟು ಹಾಕುತ್ತಾರೆ. ಅಗತ್ಯ ಮಾಹಿತಿ ಕೊರತೆಯಿಂದ ಆಸಕ್ತಿ ಇರುವವರೂ ನೇತ್ರದಾನ ಮಾಡಲು ಸಾಧ್ಯವಾಗುತ್ತಿಲ್ಲ. ನೇತ್ರದಾನದ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಿಸಲಾಗುತ್ತದೆ. ನೇತ್ರದಾನದಲ್ಲಿ ಅತ್ಯಂತ ಪ್ರಮುಖ ಹಂತವೆಂದರೆ ನಿಮ್ಮ ನಿರ್ಧಾರವನ್ನು ಕುಟುಂಬದವರಿಗೆ ಮುಂಚಿತವಾಗಿಯೇ ತಿಳಿಸುವುದು. ಏಕೆಂದರೆ ಕಣ್ಣುಗಳನ್ನು ಮರಣದ ನಂತರ ಮಾತ್ರ ದಾನ ಮಾಡಬಹುದು. ಮರಣವಾದ ನಂತರ 6 ಗಂಟೆಗಳ ಒಳಗೆ ನೇತ್ರ ಬ್ಯಾಂಕ್‌ಗೆ ಮಾಹಿತಿ ನೀಡಬೇಕಾಗುತ್ತದೆ. ಕುಟುಂಬದವರಿಗೆ ಈ ವಿಷಯ ತಿಳಿದಿದ್ದರೆ ಮಾತ್ರ ಸಮಯಕ್ಕೆ ಸರಿಯಾಗಿ ಪ್ರಕ್ರಿಯೆ ಆರಂಭವಾಗುತ್ತದೆ. ಈ ಒಂದು ಹೆಜ್ಜೆ ದಾನ ಯಶಸ್ವಿಯಾಗಲು ನಿರ್ಣಾಯಕವಾಗಿರುತ್ತದೆ ಎಂದು ತಿಳಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಧರಣೇಶ್ ಮಾತನಾಡಿ, ಕಣ್ಣುಗಳು ಮಾನವ ದೇಹದ ಅತ್ಯಂತ ಅಮೂಲ್ಯವಾದ ಅಂಗ. ಸತ್ತ ನಂತರ, ಕಣ್ಣುಗಳನ್ನು ಅಗ್ನಿಸ್ಪರ್ಶ ಅಥವಾ ಮಣ್ಣಿನಲ್ಲಿ ಹೂಳುವ ಮೂಲಕ ವ್ಯರ್ಥ ಮಾಡಬಾರದು. ಮೃತ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ಅಂಧರು ದೃಷ್ಟಿ ಪಡೆಯಬಹುದು. ನೇತ್ರದಾನವು ಕಾರ್ನಿಯಲ್ ಕುರುಡುತನದಿಂದ ಬಳಲುತ್ತಿರುವ ಜನರು ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ಎಚ್.ಹರೀಶ್ ಮಾತನಾಡಿ, ಕಣ್ಣುಗಳ ರಕ್ಷಣೆ ಮತ್ತು ಆರೋಗ್ಯದ ಬಗ್ಗೆ ನಾವೆಲ್ಲರೂ ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಕಣ್ಣಿನ ಅಕ್ಷಿ ಪಟಲ ರೋಗಕ್ಕೆ ಮಧುಮೇಹ, ರಕ್ತದೊತ್ತಡ ಕಾರಣವಾಗಿದ್ದು, ಕಣ್ಣಿನ ಕಾಯಿಲೆಯನ್ನು ಕೂಡಲೇ ವೈದ್ಯರಿಗೆ ತೋರಿಸಿ ಪರಿಹರಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಗುಣಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನೇತ್ರತಜ್ಞೆ ಡಾ.ಎಸ್.ಸಿಂಧು, ನೇತ್ರದಾನದ ಮಹತ್ವ ಮತ್ತು ನೇತ್ರದಾನದ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಿದ್ದರು.
ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಲಯನ್ಸ್ ಕ್ಲಬ್ ಸನ್ ರೈಸ್, ಚನ್ನರಾಯಪಟ್ಟಣ ಪದಾಧಿಕಾರಿಗಳು ಜಾಥಾದಲ್ಲಿ ಘೋಷಣಾ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಜೆ.ಸಿ.ಗೋವಿಂದರಾಜು, ಕಾರ್ಯದರ್ಶಿ ಡಿ.ಕೆ.ಮಂಜುನಾಥ್, ಖಜಾಂಚಿ ಕಾಂತರಾಜು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಾಧಿಕ್ಷಕಿ ಪದ್ಮಮ್ಮ, ಕ್ಷ-ಕಿರಣ ತಂತ್ರಜ್ಞ ಗುರುಮೂರ್ತಿ, ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.