ಬೇಲೂರು ತಾಲೂಕಿನ ಗ್ರಾಮಗಳಲ್ಲಿ ಆನೆ ಸಂಚರಿಸುತ್ತಿರುವುದು.
- ಶಾಲಾ ಮಕ್ಕಳ ಭವಿಷ್ಯ ಅತಂತ್ರ
- ಕಾಡಾನೆ-ಮಾನವ ಸಂಘರ್ಷದ ಪರಿಣಾಮ
- ಜೀವಭಯದಲ್ಲೇ ಸಾಗುತ್ತಿದೆ 800ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣ
ಹಾಸನ; ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷದಿಂದ ಶಾಲಾ ಮಕ್ಕಳ ಶೈಕ್ಷಣಿಕ ಭವಿಷ್ಯ ಅತಂತ್ರಸ್ಥಿತಿಗೆ ತಲುಪಿದೆ. ಕಾಡಾನೆ ಹಾವಳಿ ಇರುವ ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು ತಾಲೂಕಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಶಾಲೆಗಳ 800ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸ ಜೀವಭಯದಲ್ಲೇ ನಡೆಯಬೇಕಿದೆ.
ಸಕಲೇಶಪುರ ತಾಲೂಕಿನಲ್ಲಿ 15 ಸರ್ಕಾರಿ ಪ್ರಾಥಮಿಕ ಶಾಲೆಗಳು ಕಾಡಾನೆ ಪೀಡಿತ ಪ್ರದೇಶಗಳಲ್ಲೇ ಇವೆ. ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 282 ಮಕ್ಕಳು ಕಾಡಾನೆಗಳ ಭಯದಲ್ಲೇ 2 ರಿಂದ 3 ಕಿಲೋಮೀಟರ್ ದೂರ ಶಾಲೆಗೂ ಮನೆಗೂ ನಡೆದುಕೊಂಡೇ ಓಡಾಡಬೇಕಿದೆ. ಅದೇ ರೀತಿ ಬೇಲೂರು ತಾಲೂಕಿನ 8 ಶಾಲೆಯ 240 ಮಕ್ಕಳು, ಅರಕಲಗೂಡು ತಾಲೂಕಿನ 9 ಶಾಲೆಗಳ 183 ಮಕ್ಕಳು, ಆಲೂರು ತಾಲೂಕಿನ 8 ಶಾಲೆಯ 120ಕ್ಕೂ ಹೆಚ್ಚು ಮಕ್ಕಳು ಸಾರಿಗೆ ಬಸ್ ಸೌಲಭ್ಯ ಇಲ್ಲದಿವುದರಿಂದ ಪ್ರತಿನಿತ್ಯ ಶಾಲೆಗೆ ನಡೆದುಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಎಲ್ಲಿಲ್ಲಿ ಶಾಲೆಗಳು?: ಸಕಲೇಶಪುರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಮೂಗಲಿ, ಹೆಬ್ಬನಹಳ್ಳಿ, ಕಾಕನಮನೆ, ಹೊಸಪೇಟೆ, ಹೆಗ್ಗದೆ, ಕಡಗರವಳ್ಳಿ, ದೊಡ್ಡನಗರ, ಜನ್ನಾಪುರ ದಿಣ್ಣೆಕೆರೆ, ಜನ್ನಾಪುರ, ವಣಗೂರು, ಕೆರೋಡಿ, ಬಾಳೆಕೆರೆ, ದೊಡ್ಡಕುಂದೂರು, ಸುಳ್ಳಕ್ಕಿ ಸೇರಿ ಇನ್ನೂ ಹಲವು ಗ್ರಾಮಗಳಲ್ಲಿರುವ ಶಾಲೆಗಳು ಕಾಡಾನೆ ಹಾವಳಿ ಇರುವ ಪ್ರದೇಶದಲ್ಲೇ ಇವೆ.
ಬೇಲೂರು ತಾಲ್ಲೂಕಿನ ಗೆಂಡೇಹಳ್ಳಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಕಲ್ಲೇರಿ, ಬಿಕ್ಕೋಡು,
ಹೊಸ್ಕೂರು, ಚಿಕ್ಕ ಬಿಕ್ಕೋಡು, ಅರಕವಳ್ಳಿ ಹಾಗು ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ, ಶಿರದನಹಳ್ಳಿ, ಮಾಸವತ್ತೂರು, ಆಲದನಹಳ್ಳಿ, ಹಿಪ್ಪಲಿ, ಕೋಟೆ, ಮದಲಾಪುರ, ಮಾಗೋಡು, ಆಲೂರು ತಾಲ್ಲೂಕಿನ 8ಕ್ಕೂ ಹೆಚ್ಚು ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿನಿತ್ಯ ಕಾಡಾನೆಯ ಭಯದಲ್ಲೇ ಶಾಲೆಗೆ ತೆರಳಬೇಕಿದೆ. ಇದು ಚಿಕ್ಕ ಮಕ್ಕಳ ಕಲಿಕೆಗೆ ಹಿನ್ನಡೆಯುಂಟು ಮಾಡಿದೆ. ಅಲ್ಲದೇ ಕಾಡಾನೆ ಹಾವಳಿಯಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಬಹುತೇಕ ಪಾಲಕರು ಬಡವರು, ಕೂಲಿ ಕಾರ್ಮಿಕರೇ ಆಗಿದ್ದಾರೆ. ಅವರೆಲ್ಲರೂ ಅನಿವಾರ್ಯವಾಗಿ ಕಾಡಾನೆ ಹಾವಳಿಯ ನಡುವೆಯೂ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಕಿದೆ. ಕೆಲ ಸ್ಥಿತಿವಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದರಿಂದ ಶಾಲಾ ವಾಹನಗಳಲ್ಲಿ ಕಳುಹಿಸುತ್ತಿದ್ದಾರೆ. ಬಡವರು, ಖಾಸಗಿ ಶಾಲೆ ಶುಲ್ಕ, ವಾಹನ ಬಾಡಿಗೆ ನೀಡಲಾಗದೆ ಜೀವದ ಹಂಗು ತೊರೆದು ಅಪಾಯ ಎದುರಿಸಿಕೊಂಡೇ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ.
ಕೆಲ ಶಾಲೆಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡೇ ಇರುವುದರಿಂದ ಯಾವ ಯಾವ ಸಂದರ್ಭದಲ್ಲಿ ಅಪಾಯ ಎದುರಾಗುತ್ತದೆ ಎಂದು ಊಹಿಸಲು ಸಾಧ್ಯವಾಗುವುದಿಲ್ಲ. ಕಾಡಾನೆಗಳು ಶಾಲೆಯ ಮುಂದೆಯೇ ಹೋಗಿರುವುದು, ಶಾಲೆ ಬಳಿಗೆ ಬಂದಿರುವ ಸಾಕಷ್ಟು ಉದಾಹರಣೆಗಳು ಜಿಲ್ಲೆಯಲ್ಲಿವೆ. ಹೀಗಾಗಿ ಮಕ್ಕಳು ಮಾತ್ರವಲ್ಲದೇ ಶಿಕ್ಷಕರೂ ಶಾಲೆಗೆ ಬರಲು ಹೆದರುವ ಪರಿಸ್ಥಿತಿ ಮಲೆನಾಡು ಭಾಗದಲ್ಲಿ ಎದುರಾಗಿದೆ.
ಕಾಡಾನೆ ಸಂಘರ್ಷ ಇರುವ ಕಡೆಗಳಲ್ಲಿ 7 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳನ್ನು ಒಂದುಗೂಡಿಸಿ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಕಾಡಾನೆ ಪೀಡಿತ ಬೇಲೂರು ತಾಲೂಕಿನ 8 ಶಾಲೆಗಳನ್ನು ಸೇರಿಸಿ ಗೆಡ್ಡೇಹಳ್ಳಿ ಹಾಗು ಬಿಕ್ಕೋಡು ಭಾಗದಲ್ಲಿ 2 ಕೆಪಿಎಸ್ ತೆರೆಯಲು ಚಿಂತಿಸಲಾಗಿದೆ.
ಅದೇ ರೀತಿ ಸಕಲೇಶಪುರ ತಾಲೂಕಿನ 15 ಶಾಲೆಗಳನ್ನು ಸೇರಿಸಿ ಬೆಳಗೋಡು, ಮಾರನಹಳ್ಳಿ, ಸುಂಡೇಕೆರೆ, ವನಗೂರು, ಯಸಳೂರು ಭಾಗದಲ್ಲಿ ಒಟ್ಟು 5 ಹಾಗು ಅರಕಲಗೂಡು ತಾಲೂಕಿನ 9 ಶಾಲೆಗಳನ್ನು ಒಟ್ಟುಗೂಡಿಸಿ ಮಲ್ಲಿಪಟ್ಟಣದಲ್ಲಿ ಒಂದು ಕೆಪಿಎಸ್ ತೆರೆಯಲು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ತುರ್ತಾಗಿ ಕೆಪಿಎಸ್ ನಿರ್ಮಿಸಿ, ವಾಹನ ವ್ಯವಸ್ಥೆ ಕಲ್ಪಿಸಿದರೆ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ವಾಹನ ಸೌಲಭ್ಯ ಕಲ್ಪಿಸಲು ಆಗ್ರಹ:
ಮಲೆನಾಡು ಪ್ರದೇಶದಲ್ಲಿ ಶಾಲೆಗೂ ಮನೆಗೂ ಬಹಳ ದೂರವಿರುತ್ತದೆ. ಕಾಫಿ ತೋಟ, ಅರಣ್ಯ ಪ್ರದೇಶ ವ್ಯಾಪ್ತಿಯ ರಸ್ತೆಯಲ್ಲೆ ಮಕ್ಕಳು ಶಾಲೆಗೆ ತೆರಳಬೇಕಿರುವುದರಿಂದ ಪ್ರತಿದಿನ ಕಾಡಾನೆ ಎದುರಾಗುವ ಭಯದಲ್ಲೇ ಶಾಲೆಗೆ ತೆರಳಬೇಕಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಕಾಡಾನೆ ಪೀಡಿತ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ