ನಂಜನಗೂಡು:
ನೆರೆಯ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜೀವ ನದಿ ಕಪಿಲೆ ಮೈದುಂಬಿ ಹರಿಯುತ್ತಿದೆ.
ಕಬಿನಿ ಜಲಾಶಯವು ತುಂಬಿರುವ ಹಿನ್ನೆಲೆಯಲ್ಲಿ ಸುಮಾರು 27 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗಿದೆ. ಇದರಿಂದ ಕಪಿಲೆಯು ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ಇತಿಹಾಸ ಪ್ರಸಿದ್ಧ 16 ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ಸ್ನಾನಘಟ್ಟ, ಅಯ್ಯಪ್ಪಸ್ವಾಮಿ, ಮುಡಿಕಟ್ಟೆ, ಶೇ.80 ಭಾಗ ಮುಳುಗಿದೆ. ನದಿಯ ತಟ್ಟದಲ್ಲಿ ಯಾವುದೇ ಅವಘಡ ಸಂಭವಿಸಿದಂತೆ, ಮುಂಜಾಗ್ರತಾ ಕ್ರಮವಾಗಿ ಸ್ನಾನಘಟ್ಟದಲ್ಲಿ ಭಕ್ತರ ಪುಣ್ಯಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ನದಿಪಾತ್ರದಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ. ಭಕ್ತರು ನದಿಗೆ ಇಳಿಯದಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಕೆ ನೀಡಲಾಗುತ್ತದೆ.
ಅಧಿಕಾರಿಗೆ ಸೂಚನೆ: ಕಬಿನಿ ಜಲಾಶಯದಿಂದ 27 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿರುವುದರಿಂದ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ, ಪರಶುರಾಮರ ದೇವಾಲಯ, ಅಯ್ಯಪ್ಪ ಸ್ವಾಮಿ ದೇವಾಲಯ ಇನ್ನು ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದೇನೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ತಾಲೂಕು ಆಡಳಿತ, ನಗರ ಸಭೆಯ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಹಳ್ಳದಕೇರಿ, ಸರಸ್ವತಿ ಕಾಲನಿ, ಮೇದರ ಬೀದಿ, ಸಂಗಮ, ಹುಲ್ಲಹಳ್ಳಿ ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ಡಂಗೂರ ಸಾರಲು ಹಾಗೂ ನದಿಯಲ್ಲಿ ನೀರು ಕಡಿಮೆಯಾಗುವವರೆಗೂ ಅಧಿಕಾರಿಗಳಿಗೆ ತಗ್ಗು ಪ್ರದೇಶಗಳಿಗೆ ಭೇಟಿ ನೀಡಲು ಸೂಚನೆ ನೀಡಿದ್ದೇನೆ ಎಂದು ಶಾಸಕ ದರ್ಶನ್ ಧುವನಾರಾಯಣ ವಿಜಯವಾಣಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ನದಿಯಲ್ಲಿ ನೀರು ಇನ್ನು ಅಧಿಕವಾದರೆ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ತಾಲೂಕು ಆಡಳಿತ ಸಂಪೂರ್ಣವಾಗಿ ಸಿದ್ಧವಾಗಿದೆ. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ತಗ್ಗು ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಲು, ಎಚ್ಚರಿಕೆಯಿಂದ ಇರಲು ತಿಳಿಸುವಂತೆ ಮಾರ್ಗದರ್ಶನ ನೀಡಿದ್ದಾರೆ ತಹಸೀಲ್ದಾರ್ ಸ್ಮಿತಾ ರಾಮ ತಿಳಿಸಿದ್ದಾರೆ.