ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಶ್ರಯದಲ್ಲಿ ನಶೆಮುಕ್ತ ಸಮಾಜ ಧ್ಯೇಯವಾಕ್ಯದೊಂದಿಗೆ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ನಮ್ಮ ಪೊಲೀಸ್-ನಮ್ಮ ಹೆಮ್ಮೆ’ 5 ಕಿ.ಮೀ.ಓಟಕ್ಕೆ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು. ಶಾಸಕ ಎಚ್.ಪಿ. ಸ್ವರೂಪ್, ಎಸ್ಪಿ ಶುಭನ್ವಿತಾ ಇತರರಿದ್ದರು. 
ಹಾಸನ

ಮಾದಕ ವಸ್ತುಗಳ ಸೇವನೆ ವಿರುದ್ಧ ಹೋರಾಟ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಮಾದಕ ವಸ್ತುಗಳ ಸೇವನೆ ವಿರುದ್ಧ ಹೋರಾಟ ಅಗತ್ಯ
  • ಸಂಸದ ಶ್ರೇಯಸ್ ಪಟೇಲ್ ಕರೆ
  • ನಮ್ಮ ಪೊಲೀಸ್ ನಮ್ಮ ಹೆಮ್ಮೆ ಮ್ಯಾರಥಾನ್ ಗೆ ಚಾಲನೆ
ಹಾಸನ: ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ಪದಾರ್ಥಗಳು ಯುವಕರ ಜೀವನವನ್ನೇ ಹಾಳು ಮಾಡುತ್ತಿದ್ದು, ಅದರ ವಿರುದ್ಧ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಕರೆ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಶ್ರಯದಲ್ಲಿ ನಶೆಮುಕ್ತ ಸಮಾಜ ಧ್ಯೇಯವಾಕ್ಯದೊಂದಿಗೆ ಇತ್ತೀಚೆಗೆ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ನಮ್ಮ ಪೊಲೀಸ್-ನಮ್ಮ ಹೆಮ್ಮೆ’ 5 ಕಿ.ಮೀ. ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಡ್ರಗ್ ವ್ಯಸನವು ಯುವ ಸಮುದಾಯದ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿದೆ. ದೈಹಿಕವಾಗಿ ಸದೃಢರಾಗಿರುವ ಯುವಕರು ಮಾನಸಿಕವಾಗಿಯೂ ಶಕ್ತಿಶಾಲಿಗಳಾಗಿರುತ್ತಾರೆ. ಇಂತಹ ಜನಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತವೆ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಮಾದಕ ವಸ್ತುಗಳ ನಿಷೇಧ ಕುರಿತು ಯುವಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಪಾಲಕರು ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಯುವಕರು ದುಶ್ಚಟಗಳಿಂದ ದೂರವಿದ್ದು ಕ್ರೀಡೆ ಮತ್ತು ಸಕಾರಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ರಾಜ್ಯಾದ್ಯಂತ 5 ರಿಂದ 10 ಕಿ.ಮೀ. ಮ್ಯಾರಥಾನ್ ಓಟಗಳನ್ನು ಆಯೋಜಿಸಲಾಗುತ್ತಿದೆ. ಡ್ರಗ್ಸ್‌ಮುಕ್ತ ಸಮಾಜ ನಿರ್ಮಾಣ ಮತ್ತು ಅಪರಾಧ ಪ್ರಮಾಣ ಕಡಿಮೆಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
5 ಕಿ.ಮೀ. ಓಟದಲ್ಲಿ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು ಹಾಗೂ ಸರ್ಕಾರಿ ನೌಕರರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಎಸ್‌ಡಿಎಂ ಕಾಲೇಜು ಮತ್ತು ಆಸ್ಪತ್ರೆ ನಿರ್ದೇಶಕ ಪ್ರಸನ್ನ ರಾವ್, ಶೈಲಜಾ, ಭಾರತೀಯ ರೆಡ್ ಕ್ರಾಸ್ ಸಭಾಪತಿ ಎಚ್.ಪಿ. ಮೋಹನ್, ಅರಣ್ಯಾಧಿಕಾರಿ ಹೇಮಂತ್, ಎಎಸ್ಪಿ ತಮಯ್ಯ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಐ.ಜಿ. ರಮೇಶ್, ಲಯನ್ಸ್ ಹಾಸನಾಂಬ ಕ್ಲಬ್ ಅಧ್ಯಕ್ಷ ಕೆ.ಕೆ. ಮೋಹನ್ ಕುಮಾರ್, ಶಬ್ಬೀರ್ ಅಹಮದ್, ಕೆ.ಟಿ. ಜಯಶ್ರೀ ಇದ್ದರು.