ಶ್ರವಣಬೆಳಗೊಳದ ಅಂಬಿಕಾ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಹಾಗೂ ಆಹಾರಮೇಳ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಕ್ಕಳೊಂದಿಗೆ ಚರ್ಚಿಸಿದರು.
- ಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ
- ಅಂಬಿಕಾ ಶಾಲೆ
ಶ್ರವಣಬೆಳಗೊಳ; ಮಕ್ಕಳ ಸಂತೆ ಎಂಬುದು ವಿದ್ಯಾರ್ಥಿಗಳಿಗೆ ಕೇವಲ ಶೈಕ್ಷಣಿಕ ಜ್ಞಾನವನ್ನಷ್ಟೇ ಅಲ್ಲದೆ ಜೀವನಕ್ಕೆ ಅತ್ಯಗತ್ಯವಾಗಿ ಬೇಕಾದ ವ್ಯಾವಹಾರಿಕ ಜ್ಞಾನವನ್ನೂ ತಿಳಿಸುವಂತಹ ಮಹತ್ವದ ಕಾರ್ಯವಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಅಂಬಿಕಾ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಹಾಗೂ ಆಹಾರಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಜೀವನ ಹೇಗಿರುತ್ತದೆ ಎಂಬುದನ್ನು ಮಕ್ಕಳ ಸಂತೆ ಮತ್ತು ಆಹಾರ ಮೇಳದಲ್ಲಿ ಮಕ್ಕಳು ಪ್ರತ್ಯಕ್ಷವಾಗಿ ನೋಡುವ ಮೂಲಕ ಅದನ್ನು ತಿಳಿಯಬಹುದಗಿದೆ. ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ವ್ಯಾವಹಾರ ಜ್ಞಾನವನ್ನು ಗುರುತಿಸಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿ ಎಂದರು.
ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಜ್ಞಾನ ವಿಕಾಸಗೊಳ್ಳುವು ದರೊಂದಿಗೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು.
ಸಾವಯವ ಕೃಷಿಕ ರಾಘವೇಂದ್ರ ಬೆಕ್ಕ ಮಾತನಾಡಿ, ಮಕ್ಕಳ ಸಂತೆ ಶಾಲೆಗಳಲ್ಲಿ ಆಯೋಜಿಸಲಾಗುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಮಕ್ಕಳು ಸ್ವತಃ ವ್ಯಾಪಾರಿಗಳಾಗಿ ಹಣ್ಣು-ಹಂಪಲು, ತಿನಿಸುಗಳು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವ್ಯಾವಹಾರಿಕ ಜ್ಞಾನ, ಲೆಕ್ಕಾಚಾರ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕೌಶಲವನ್ನು ಕಲಿಯುತ್ತಾರೆ. ಸ್ವಾವಲಂಬನೆ ಪಾಠಗಳನ್ನು ಕಲಿಯುವುದರ ಜತೆಗೆ ಮಕ್ಕಳಲ್ಲಿ ಸೃಜನಶೀಲತೆ ಆರ್ಥಿಕ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಇದೇ ವೇಳೆ ಶ್ರೀಗಳು ವಿದ್ಯಾರ್ಥಿಗಳಿಂದ ವಿವಿಧ ಪದಾರ್ಥಗಳನ್ನು ಕೊಳ್ಳುವ ಮೂಲಕ ಮಕ್ಕಳಿಗೆ ಸ್ಫೂರ್ತಿ ತುಂಬಿದರು. ಅದೇ ರೀತಿ ವಿದ್ಯಾರ್ಥಿಗಳು ಉತ್ಸಾಹದಿಂದ ವಿವಿಧ ತರಕಾರಿಗಳು, ಹಣ್ಣುಗಳು, ಬಗೆಬಗೆಯ ತಿಂಡಿ ತಿನಿಸುಗಳಾದ ಪಾನಿಪುರಿ, ಸಲಾಡ್, ಜ್ಯೂಸ್, ಬಿಸ್ಕತ್ ಸೇರಿದಂತೆ ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪಾಲಕರು ಮಕ್ಕಳು ತಯಾರಿಸಿದ ಪದಾರ್ಥಗಳ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತರಕಾರಿ, ತಂಪು ಪಾನೀಯ, ಪಾನಿಪುರಿ, ಬೇಲ್ ಪುರಿ, ಸೊಪ್ಪು ಮತ್ತಿತರ ಪದಾರ್ಥಗಳನ್ನು ಖರೀದಿಸಿದರು.
ಬಾಹುಬಲಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಬನ್ ಪಿ.ದತವಾಡೆ ಮಾತನಾಡಿದರು. ಮುಖ್ಯ ಶಿಕ್ಷಕಿ ಸರೋಜಾ, ರೈತ ಸಂಘದ ಅಧ್ಯಕ್ಷ ಮಂಜೇಗೌಡ ಮುಂತಾದವರಿದ್ದರು.