ಅರಸೀಕೆರೆ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರೇಹಳ್ಳಿ ಗ್ರಾಮದ ಮೋನಿಕಾ(18) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೋನಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಏ.5ರಂದು ಗೀಜಿಹಳ್ಳಿ ಎಪಿಎಂಸಿ ಉಪ ಪ್ರಾಂಗಣದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ಕರೆದುಕೊಂಡು ಬರಲು ಸ್ಕೂಟರ್‌ನಲ್ಲಿ ಹೋಗಿದ್ದ ವೇಳೆ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಮೋನಿಕಾಳನ್ನು ತಕ್ಷಣ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದು, ಪಾಲಕರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಮೋನಿಕಾ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಜರುಗಲಿದ್ದು, ಐದಕ್ಕೂ ಹೆಚ್ಚು ಜನರಿಗೆ ಅಗತ್ಯ ಅಂಗಗಳ ದಾನ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಮಗಳು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಆಕೆಯ ಅಂಗಾಂಗಗಳ ಮೂಲಕ ಬೇರೆಯವರ ಬಾಳಿಗೆ ಬೆಳಕಾಗುತ್ತಿದ್ದಾಳೆ. ಇದೇ ಸಾರ್ಥಕತೆಯಲ್ಲಿ ನಮ್ಮ ಮಗಳನ್ನು ಕಾಣುತ್ತೇವೆ ಎನ್ನುವ ಧನ್ಯ ಭಾವದಲ್ಲಿ ಕುಟುಂಬಸ್ಥರು ಇದ್ದಾರೆ.