- ಸಂಪೂರ್ಣ ಹದಗೆಟ್ಟಿದೆ ಜಿಲ್ಲಾಡಳಿತ ವ್ಯವಸ್ಥೆ
- ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ
ಹಾಸನ: ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲಾಧಿಕಾರಿ ಶೋ ಅಪ್ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ವಾಗ್ದಾಳಿ ನಡೆಸಿದರು.
ಜನರ ಸಂಕಷ್ಟ ಕೇಳೋರೆ ಇಲ್ಲ ಎನ್ನುವಂತಾಗಿದೆ. ಕಾಮಸಮುದ್ರ ಏತ ನೀರಾವರಿಗೆ ಹಣ ಮಂಜೂರಾಗಿದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಆಗಿಲ್ಲ. ಅಂತಹವರು ಜಿಲ್ಲಾಧಿಕಾರಿ ಆಗೋದಕ್ಕೆ ಅನ್‌ಫಿಟ್ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದರು.
ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಒಬ್ಬ ಅಧಿಕಾರಿಗೆ ಮೂರು-ನಾಲ್ಕು ಹುದ್ದೆ ಹೆಚ್ಚುವರಿ ಜವಾಬ್ದಾರಿ ಕೊಟ್ಟಿದ್ದಾರೆ. ಕೃಷ್ಣ ಬೈರೇಗೌಡರೇ ಇಲ್ಲಿ ಉಸ್ತುವಾರಿ ಸಚಿವರಾಗಿದ್ದಾರೆ, ಅವರಿಗೇ ಇಲ್ಲಿ ಆಡಳಿತ ವ್ಯವಸ್ಥೆ ಸರಿಪಡಿಸಲು ಆಗುತ್ತಿಲ್ಲ. ಪೋಡಿ, ದುರಸ್ತು ಮಾಡಿಸೋಕೆ ಆಗದೆ ಜನ ಒದ್ದಾಡ್ತಿದ್ದಾರೆ. ನಮ್ಮ ಜಿಲ್ಲೆ ಮೊದಲೇ ಈ ಸರ್ಕಾರದ ಅವಧಿಯಲ್ಲಿ ಸೊರಗಿ ಹೋಗಿದೆ. ಇಂತಹ ಅಧಿಕಾರಿಗಳಿಂದ ಮತ್ತಷ್ಟು ಜನ ಸೊರಗುವಂತಾಗಿದೆ. ಡಿ.ಸಿ.ಜಿಲ್ಲೆ ಸುತ್ತೋದು ಬಿಟ್ಟು ತಮ್ಮ ಕಚೇರಿ ಮೊದಲು ನೋಡಿಕೊಳ್ಳಲಿ. ತಹಸೀಲ್ದಾರ್‌ಗಳು ಲೂಟಿ ಹೊಡೆಯುತ್ತಿರೋದನ್ನು ಮೊದಲು ತಡೆಯಲಿ ಎಂದು ಒತ್ತಾಯಿಸಿದರು.
ನಮಗೆ ಇಂತಹ ಅಧಿಕಾರಿಗಳನ್ನು ನೋಡಿ ನಾಚಿಕೆ ಆಗ್ತಿದೆ. ಒಬ್ಬ ಎಡಿಸಿ ಹಾಕೋಕೆ ಆಗದೇ ಇರೋ ಸರ್ಕಾರ ಇದು ಎಂದು ಸರ್ಕಾರದ ವಿರುದ್ಧವೂ ಕಿಡಿ ಕಾರಿದರು. ಕೃಷ್ಣ ಬೈರೇಗೌಡರೇ ನಿಮ್ಮನ್ನು ಪ್ರಾಮಾಣಿಕರು ಎಂದುಕೊಂಡಿದ್ದೇವೆ. ಆದ್ರೆ ನಿಮ್ಮ ಉಸ್ತುವಾರಿ ಜಿಲ್ಲೆಯೇ ಲೂಟಿಕೋರರ ಕೈಗೆ ಸೇರಿದೆ. ಭೂ ಸ್ವಾಧೀನಕ್ಕೆ ಬಂದ ಹಣ ಹತ್ತು ಕೋಟಿ ವಾಪಸ್ ಕಳಿಸುತ್ತಾರೆ.ನಾನು ಮೂವತ್ತು ವರ್ಷ ಶಾಸಕನಾಗಿದ್ದೇನೆ. ಇಂತಹವರನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದರು.