ಬೇಲೂರು ಪಟ್ಟಣ ಸಮೀಪದ ವಿ.ಆರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಶಾಸಕ ಎಚ್.ಕೆ.ಸುರೇಶ್ ಸನ್ಮಾನಿಸಿದರು.  
ಹಾಸನ

ಅಭಿವೃದ್ಧಿಗೆ ಗ್ರಾಪಂ ಸದಸ್ಯರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಅಭಿಪ್ರಾಯ
  • ಸ್ನೇಹ ಸಮ್ಮಿಲನ ಕಾರ್ಯಕ್ರಮ
ಬೇಲೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯೇ ಪ್ರಥಮ ಮೆಟ್ಟಿಲು. ಇಲ್ಲಿ 5 ವರ್ಷ ಸೇವೆ ಸಲ್ಲಿಸಿದ ಎಲ್ಲ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಅಭಿವೃದ್ಧಿಗೆ ಸಹಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗೌರವಿಸುತ್ತಿದ್ದೇನೆ ಹೊರತು, ಯಾವುದೇ ರಾಜಕೀಯವಿಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಬೇಲೂರು ವಿಧಾನಸಭಾ ಕ್ಷೇತ್ರದ ಸಮಸ್ತ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ತಮ್ಮ 5 ವರ್ಷದ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಶನಿವಾರ ಪಟ್ಟಣ ಸಮೀಪದ ವಿ.ಆರ್.ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಗ್ರಾಮ ಪಂಚಾಯಿತಿ ಸದಸ್ಯರ ಕೊಡುಗೆ ಅಪಾರ. ನಾನು ಶಾಸಕನಾಗಿ ಕೆಲಸ ಮಾಡಲು ಎಲ್ಲ ಗ್ರಾಪಂ ಸದಸ್ಯರು ಸಹಕಾರ ನೀಡಿದ್ದಾರೆ. ಜತೆಗೆ ನನ್ನಂತೆಯೇ ಅವರೂ 5 ವರ್ಷಗಳ ಕಾಲ ಜನರ ಸೇವೆ ಸಲ್ಲಿಸಿ ಜನ ನಾಯಕರಾಗಿದ್ದಾರೆ. ಗ್ರಾಪಂ ಚುನಾವಣೆಗಳನ್ನು ಎದುರಿಸುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಮುಂದಿನ ದಿನಗಳಲ್ಲಿ ನನಗೆ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ ಅವರನ್ನು ಪಕ್ಷಾತೀತವಾಗಿ ಗೌರವಿಸಿ ಸನ್ಮಾನಿಸಲಾಗುತ್ತಿದೆ. ಜತೆಗೆ ಒಂದಾಗಿ ಕುಳಿತು ಊಟ ಮಾಡುವುದು ನಮ್ಮ ಉದ್ದೇಶವಷ್ಟೆ. ಇಲ್ಲಿ ಬೇರೆ ಯಾವುದೇ ರಾಜಕಾರಣದ ಉದ್ದೇಶವಿಲ್ಲ. ಮುಂದಿನ ಗ್ರಾಪಂ ಚುನಾವಣೆಗಳಲ್ಲಿ ಮತ್ತೊಮ್ಮೆ ಗೆದ್ದು ಬಂದು ನಿಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಅದೇ ರೀತಿ ಶಾಸಕರು ರಾಜ್ಯದ ಇತಿಹಾಸದಲ್ಲೆ ಪ್ರಥಮವಾಗಿ ಕ್ಷೇತ್ರದ ಎಲ್ಲ ಗ್ರಾಪಂ ಮಾಜಿ ಸದಸ್ಯರನ್ನು ಪಕ್ಷಾತೀತವಾಗಿ ಆಹ್ವಾನಿಸಿ ಸನ್ಮಾನಿಸುವ ಮೂಲಕ ಅವರ ಜವಾಬ್ದಾರಿಯನ್ನು ಹೆಚ್ಚಿಸಿ ಉತ್ತಮ ಕೆಲಸ ಮಾಡಿದ್ದಾರೆ. ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಅಲ್ಲದೆ ಶಾಸಕ ಎಚ್.ಕೆ.ಸುರೇಶ್ ಅವರು ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಬೇಲೂರು ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲಿ ಎಂದರು.
ಬೇಲೂರು ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಪಂ ಸದಸ್ಯರನ್ನು ಪಕ್ಷಾತೀತವಾಗಿ ಆಯೋಜಿಸಿ ಆಹ್ವಾನಿಸಿದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಲವಾರು ಗ್ರಾಪಂ ಸದಸ್ಯರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರಿಂದ ಅಭಿನಂದನೆ ಸ್ವೀಕರಿಸಿ, ಸಾಮೂಹಿಕವಾಗಿ ಊಟ ಸವಿದರು.
ಚಿತ್ರ:14(ಬಿಎಲ್‌ಆರ್)1-