ಚೆನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.
- ಅಗಲಿದ ಚೆನ್ನಮ್ಮಗೆ ಕಂಬನಿಯ ವಿದಾಯ
- ಕುಟುಂಬ ಸದಸ್ಯರು, ಗಣ್ಯರ ಉಪಸ್ಥಿತಿ
- 1400ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮಅವರ ಅಂತ್ಯಕ್ರಿಯೆ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಬೃಹತ್ ಮೆರವಣಿಗೆ ಮೂಲಕ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿಗೆ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ತಂದು ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಹೊಳೆನರಸೀಪುರದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಅಗಿದ್ದವು. ಜಿಲ್ಲಾಡಳಿತ ಬಾರ್‌ಗಳನ್ನು ಅಧಿಕೃತವಾಗಿ ಬಂದ್ ಮಾಡಲು ಆದೇಶಿಸಿತ್ತು. ಜತೆಗೆ ಇತರ ಅಂಗಡಿ ವರ್ತಕರು ಹೊಳೆನರಸೀಪುರದಲ್ಲಿ ಸೋಮವಾರ ಅಂತಿಮ ಯಾತ್ರೆ ಹೊರಡುವ ಮಧ್ಯಾಹ್ನದವರೆಗೆ ಸ್ವಯಂ ಬಂದ್ ಆಗಿದ್ದವು.
ಚೆನ್ನಮ್ಮ ಅವರು ಎಲ್ಲರನ್ನು ಸ್ವಂತ ಮಕ್ಕಳಂತೆ ಕಾಣುತ್ತಿದ್ದ ಮಾತೃ ಸ್ವರೂಪಿಯಾಗಿದ್ದರು. ಯಾರೇ ಮನೆಗೆ ಹೋದರೂ ಗೌರವದಿಂದ ಕಂಡು, ಊಟ, ತಿಂಡಿ, ಕಾಫಿ ನೀಡಿ ಉಪಚಾರ ಮಾಡುತ್ತಿದ್ದರು. ದೇವೇಗೌಡರ ರಾಜಕೀಯ ಆರಂಭಿಕ ಕಷ್ಟದ ದಿನಗಳಲ್ಲಿಯೂ ಅವರಿಗೆ ಬೆನ್ನೆಲುಬಾಗಿ ನಿಂತು ಪಕ್ಷ ಬೆಳೆಯಲು ಪರೋಕ್ಷ ಸಹಕಾರ ನೀಡಿದರು. ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಯಲು ಶ್ರಮಿಸಿದರು. ಮಕ್ಕಳು ಬೇರೆ, ಬೇರೆ ಇದ್ದರೂ ಕೂಡ ಕುಟುಂಬದಂತೆ ಈಗಲೂ ಒಟ್ಟಿಗೆ ಆದರ್ಶವಾಗಿ ಇದ್ದಾರೆ.
ಕುಟುಂಬ ಸದಸ್ಯರು, ಗಣ್ಯರ ಉಪಸ್ಥಿತಿ
ಎಚ್.ಡಿ.ರೇವಣ್ಣ, ಬಾಲಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಡಾ.ರಮೇಶ್, ಅನಸೂಯಾ, ಶೈಲಜಾ, ನಿಖಿಲ್ ಕುಮಾರಸ್ವಾಮಿ, ರೇವತಿ ನಿಖಿಲ್, ಅನಿತಾಕುಮಾರಸ್ವಾಮಿ, ಸೂರಜ್ ರೇವಣ್ಣ, ಡಾ.ಮಂಜುನಾಥ್, ಭವಾನಿ ರೇವಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಸಂಸದ ಡಾ.ಮಂಜುನಾಥ್, ಮಲ್ಲೇಶ್ ಬಾಬು, ಶಾಸಕರಾದ ಜಮೀರ್ ಅಹಮದ್, ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಡಿ.ಜಿ.ಸಲೀಂ, ಸ್ವರೂಪ ಪ್ರಕಾಶ್, ಎಚ್.ಕೆ.ಸುರೇಶ್, ಮುನಿರತ್ನ , ಸುರೇಶ್ ಗೌಡ, ಬೋಜೆಗೌಡ, ಹರೀಶ್ ಗೌಡ, ಸಿ.ಎನ್.ಬಾಲಕೃಷ್ಣ, ರವಿಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಎಚ್.ಆಂಜನೇಯ, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಪುಟ್ಟುರಾಜು, ಎ.ಮಂಜು, ವೈ.ಎಸ್ ದತ್ತ, ಡಾ.ಎಚ್.ಎನ್.ಕೃಷ್ಣ, ಪ್ರಭು ಇತರ ಗಣ್ಯರು ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು.
ಚೆನ್ನಮ್ಮ ಅಂತ್ಯಕ್ರಿಯೆಗೆ ಸಾವಿರಾರು ಜನರು ಆಗಮಿಸಿದ್ದರು. ಎಲ್ಲರಿಗೂ ಶಾಮಿಯಾನ ಹಾಗೂ ಖುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ನೂಕುನುಗ್ಗಲು ಉಂಟಾಗದಂತೆ ತಡೆಯಲು ಅಂತ್ಯಕ್ರಿಯೆ ವಿಧಿವಿಧಾನ ವೀಕ್ಷಿಸಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು.
ಚೆನ್ನಮ್ಮ ಅವರ ಪೂಜಾಫಲ, ತಪಸ್ಸಿನ ಫಲವಾಗಿ ಅವರ ಕುಟುಂಬ ಉನ್ನತಮಟ್ಟಕ್ಕೆ ಹೋಗಿದೆ. ಒಬ್ಬ ತಾಯಿಯಾಗಿ ಕುಟುಂಬಕ್ಕೆ ಏನು ಮಾಡಬೇಕೋ ಅದೆಲ್ಲವನ್ನು ಚೆನ್ನಮ್ಮ ಅವರು ಮಾಡಿದ್ದಾರೆ. ಜೀವನದುದ್ದಕ್ಕೂ ಬೀಗದೆ ಬಾಗಿ ನಡೆಸಿದ್ದಾರೆ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕ ಮೋಕ್ಷ ಸಿಗಲಿ.
ಆದಿಚುಂಚನಗಿರಿ ಹಾಸನ, ಕೊಡಗು ಕಾರ್ಯದರ್ಶಿ
30 ಸಾವಿರ ಜನರಿಗೆ ಊಟದ ವ್ಯವಸ್ಥೆ
ದೂರದ ಊರಿಂದ ಬರುವ ಜನರಿಗೆ ತೊಂದರೆಯಾಗದಂತೆ ಅಂತ್ಯಕ್ರಿಯೆ ನಡೆಸುವ ಸ್ಥಳದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ಬೆಂಗಳೂರಿನ ಬಾಣಸಿಗರಿಂದ ಅಡುಗೆ ತಯಾರಿಸಲಾಗಿತ್ತು. ಮಧ್ಯಾಹ್ನದ ಊಟಕ್ಕಾಗಿ ಅನ್ನ, ಸಾಂಬಾರ್, ಪಲ್ಯ ಹಾಗೂ ಮಜ್ಜಿಗೆ ತಯಾರು ಮಾಡಲಾಗಿದೆ ಎಂದು ಬಾಣಸಿಗ ಮಂಜು ಮಾಹಿತಿ ನೀಡಿದರು.
1400ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ
ಚೆನ್ನಮ್ಮ ಅವರ ಅಂತ್ಯಕ್ರಿಯೆ ಅಂಗವಾಗಿ ಬಂದೋಬಸ್ತ್‌ಗೆ 1400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಜಿಲ್ಲೆ ಅಲ್ಲದೇ ನೆರೆ ಜಿಲ್ಲೆಗಳು, ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಯಾವುದೇ ಘಟನೆಗಳಿಗೆ ಅವಕಾಶ ನೀಡಿದಂತೆ ಜಿಲ್ಲಾಡಳಿತ, ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಖುದ್ದು ಬಂದೋಬಸ್ತ್ ನೇತೃತ್ವ ವಹಿಸಿದ್ದರು. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಮೈಸೂರು ಭಾಗದ ಎಲ್ಲ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದರು. ಐವರು ಎಸ್‌ಪಿಗಳು, 250ಕ್ಕೂ ಹೆಚ್ಚು ಪಿಎಸ್‌ಐ, 50ಕ್ಕೂ ಹೆಚ್ಚು ಡಿವೈಎಸ್‌ಪಿ, ಉಳಿದಂತೆ ಮುಖ್ಯಪೇದೆ, ಪೇದೆ, ಹೋಗಾರ್ಡ್‌ಗಳನ್ನು ನಿಯೋಜಿಸಿ ವ್ಯವಸ್ಥಿತವಾಗಿ ಅಂತಿಮ ಕ್ರಿಯೆ ನಡೆಸಲು ಸಹಕಾರ ನೀಡಲಾಯಿತು.
ಚೆನ್ನಮ್ಮ ಅವರ ಅಂತಿಮ ಸಂಸ್ಕಾರಕ್ಕೆ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ಹಾಗೂ ಹೊಳೆ ನರಸೀರಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಲ್ಲದೇ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಕೆಲ ಮುಖಂಡರು ವಾಹನಗಳ ವ್ಯವಸ್ಥೆ ಮಾಡಿದ್ದರು.
ಐದು ಹೆಲಿಪ್ಯಾಡ್‌ಗಳ ನಿರ್ಮಾಣ
ಅಂತಿಮ ಸಂಸ್ಕಾರದಲ್ಲಿ ಗಣ್ಯರು ಭಾಗವಹಿಸುವ ನಿರೀಕ್ಷೆ ಇದ್ದುದ್ದರಿಂದ ವಿವಿಧೆಡೆ ಐದು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಹೊಳೆ ನರಸೀಪುರದಲ್ಲಿ ಮೂರು ಹಾಗೂ ಹರದನಹಳ್ಳಿಯಲ್ಲಿ ಎರಡು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಗಣ್ಯರು ಹೆಲಿಕಾಪರ್ ಮೂಲಕ ಆಗಮಿಸಿದ್ದರು.
ಅಂರ್ತಮುಖಿಯಾಗಿದ್ದ ಎಚ್‌ಡಿಡಿ
ಪತ್ನಿಯನ್ನು ಕಳೆದುಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಡೀ ದಿನ ಅಂರ್ತಮುಖಿಯಾಗಿದ್ದರು. ಮೆರವಣಿಗೆ ಉದ್ದಕ್ಕೂ ಚೆನ್ನಮ್ಮ ದರ್ಶನ ಪಡೆದು, ದೇವೇಗೌಡರ ಬಳಿ ಬಂದು ಮಾತನಾಡಿರುವ ಮುಖಂಡರಿಗೆ ಕೈ ಮುಗಿದು ಸುಮ್ಮನಾಗುತ್ತಿದ್ದರು. ಹೊಳೆನರಸೀಪುರದ ಎಚ್.ಡಿ.ರೇವಣ್ಣ ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಿದಾಗ, ಶವದ ಬಳಿಯೇ ಕುಳಿತಿದ್ದ ದೇವೇಗೌಡರು, ಪತ್ನಿಯ ಶವವನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು. ಆತ್ಮೀಯರು ಬಂದು ಮಾತನಾಡಿಸುವ ವೇಳೆ ಭಾವುಕರಾಗಿ ಕೈ ಅಲ್ಲಾಡಿಸುತ್ತಿದ್ದರು. ಅಂತಿಮ ಸಂಸ್ಕಾರದ ವೇಳೆ ಗೌರವ ವಂದನೆ ಸಲ್ಲಿಸುವ ವೇಳೆ, ಹೂ ಗುಚ್ಛ ಇಟ್ಟು, ಕ್ಷಣ ಕಾಲ ಅಲ್ಲಿಯೇ ನಿಂತು ಭಾವುಕರಾಗಿದ್ದರು. ಪತ್ನಿ ಶವ ಮಣ್ಣು ಮಾಡುವಾಗ ನಿರ್ಲಿಪ್ತರಾಗಿ ಮೌನಿಯಾಗಿದ್ದರು.
ಮಾರ್ಗದರ್ಶಕರಾಗಿದ್ದರು: ಕುಟುಂಬದಲ್ಲಿ ಮಾರ್ಗದರ್ಶಕರಾಗಿದ್ದರು. ದೇವೇಗೌಡರು ರಾಜಕೀಯದಲ್ಲಿ ಒತ್ತಡದಲ್ಲಿ ಇರುತ್ತಿದ್ದರಿಂದ ಮನೆಗೆ ಬಂದವರಿಗೆ ಕಾಳಜಿ, ಪ್ರೀತಿ ಸೋರಿಸುತ್ತಿದ್ದರು. ಕುಮಾರಸ್ವಾಮಿ ಅವರು ತಾಯಿಯ ಜೊತೆ ಆತ್ಮೀಯವಾಗಿದ್ದರು. ಗಂಟೆಗಟ್ಟಲೇ ಮಾತುಕತೆ ಹರಟೆ ಹೊಡೆಯುತ್ತಿದ್ದರು. ಹಬ್ಬ, ವಿಶೇಷ ದಿನಗಳಲ್ಲಿ ಒಟ್ಟಿಗೆ ಸೇರಿ ಸಂತೋಷದಿಂದ ಇರುತ್ತಿದ್ದರು. ಎಲ್ಲ ಮೊಮ್ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದರು.