ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸೋಮವಾರ ನಡೆದ ಶ್ರೀರಾಘವೇಂದ್ರಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳಾ ಭಕ್ತರು ಕೋಲಾಟ ದೊಂದಿಗೆ ರಾಯರ ನಾಮಸ್ಮರಣೆ ಮಾಡಿದರು. 
ಹಾಸನ

ಉತ್ತರಾಧಿ ಮಠದಲ್ಲಿ ರಾಯರ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಘವೇಂದ್ರ ಸ್ವಾಮಿಗೆ ಪೂಜೆ ಪುನಸ್ಕಾರ
  • ರಥ ಎಳೆಯುವ ಮೂಲಕ ಭಕ್ತಿ ಮೆರೆದ ಜನರು

ಅರಕಲಗೂಡು:

ತಾಲೂಕಿನ ರಾಮನಾಥಪುರ ಉತ್ತರಾಧಿ ಮಠದ ಶ್ರೀ ರಾಘವೇಂದ್ರಸ್ವಾಮಿ ರಥೋತ್ಸವ ಸೋಮವಾರ ಸಂಭ್ರಮದಿಂದ ಜರುಗಿತು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ರಾಯರ ದರ್ಶನ ಪಡೆದು ಪುನೀತರಾದರು.

ರಥೋತ್ಸವ ಅಂಗವಾಗಿ ಶ್ರೀಮಠದಲ್ಲಿ ವಿವಿಧ ಪೂಜಾ ವಿಧಾನಗಳು ಧಾರ್ಮಿಕ ಕಾರ್ಯಗಳು ನಡೆದವು. ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯವನ್ನು ವಿವಿಧ ಬಗೆಯ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.
ಮಧ್ಯಾಹ್ನ 12 ಗಂಟೆಗೆ ದೇವಾಲಯದ ಮುಂಭಾಗದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ವಿವಿಧ ಬಗೆಯ ಪುಷ್ಪಗಳು ಹಾಗೂ ವರ್ಣರಂಜಿತ ಬಟ್ಟೆಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮಂಗಳವಾದ್ಯಗಳ ನಾದದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ಸಾಮೂಹಿಕವಾಗಿ ರಥ ಎಳೆಯುವ ಮೂಲಕ ಭಕ್ತಿ ಮೆರೆದರು.
ದೇವಾಲಯದ ಮುಂಭಾಗದಿಂದ ಆರಂಭಗೊಂಡ ರಥವು ರಾಜಬೀದಿಯಲ್ಲಿ ಸಾಗಿತು.ಮಾರ್ಗದುದ್ದಕ್ಕೂ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ನಾಮಸ್ಮರಣೆ ಮಾಡಿದರು.
ರಥೋತ್ಸವದ ಹಿನ್ನೆಲೆಯಲ್ಲಿ ರಾಮನಾಥಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಉತ್ತರಾಧಿ ಮಠದ ವ್ಯವಸ್ಥಾಪಕ ಕನಕಾಚಾರ್ಯರು ಮತ್ತಿತರರಿದ್ದರು.