ತಾಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದಲ್ಲಿ ಶ್ರೀಆಂಜನೇಯಸ್ವಾಮಿ ನೂತನ ದೇವಾಲಯ ಲೋಕಾರ್ಪಣೆಗೊಳಿಸಿದ್ದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.
ಹೊಳೆನರಸೀಪುರ: ಪಂಚ ಗ್ಯಾರಂಟಿಗಳ ಪರಿಣಾಮ ರಾಜ್ಯದ ಪ್ರತಿ ಪ್ರಜೆ ಮೇಲೆ ರಾಜ್ಯ ಸರ್ಕಾರ 1 ಲಕ್ಷ ರೂ. ಸಾಲದ ಹೊರೆ ಹೇರಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಶ್ರೀ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆಯ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ತಿಂಗಳಿಗೆ 2 ಸಾವಿರ ರೂ. ತೆಗೆದುಕೊಂಡು ಏನು ಮಾಡುತ್ತೀರಿ. ಎಷ್ಟು ವರ್ಷ ಕೊಡಬಲ್ಲರು? ಹಿಮಾಚಲದಲ್ಲಿ ಈಗಾಗಲೇ ಗ್ಯಾರಂಟಿಗಳ ಪ್ರಭಾವದಿಂದ ಅಧಿಕಾರಿಗಳಿಗೆ ಸಂಬಳ ನೀಡಲು ಬೊಕ್ಕಸದಲ್ಲಿ ಹಣವಿಲ್ಲ. ರಾಜ್ಯದಲ್ಲೂ ಅಂತಹದ್ದೇ ಪರಿಸ್ಥಿತಿ ತಲೆದೋರಿದೆ. ಜಿಡಿಪಿ ಏರಿಕೆಯಿಂದಲೂ ಖುಷಿ ಪಡಬೇಕಿಲ್ಲ. ರಸ್ತೆಗಳಲ್ಲಿ ವೀಕೆಂಡ್ ಎಂಜಾಯ್ ಮಾಡಲು ಹೊರಟವರ ಕಾರು, ಬಾರುಗಳು ನೋಡಿದರೆ ಒಂದು ರೀತಿ ಐಷಾರಾಮಿ ಜೀವನ ಹಾಸುಹೊಕ್ಕಾಗಿದೆ ಎನ್ನಬಹುದು. ಆದರೆ ಗ್ರಾಮೀಣ ಭಾಗದ ಹಳ್ಳಿಗರ ಮನೆ, ಜೋಪಡಿ ಜೀವನಶೈಲಿ ನೋಡಿದರೆ ಇದು ಮಾನದಂಡವಾಗದು. ನನಗೆ ನನ್ನ ರಾಜ್ಯದ ಪರಿಸ್ಥಿತಿ ಉತ್ತಮವಾಗಬೇಕು. ಹಳ್ಳಿಗಾಡಿನ ಜನರ ಆರೋಗ್ಯ ಪರಿಸ್ಥಿತಿಗೆ ಉತ್ತಮ ಕಾರ್ಯಕ್ರಮ ಇರಬೇಕು ಎಂದರು.
ನನ್ನ ತಂದೆ, ತಾಯಿ ಮಾಡಿದ ಪುಣ್ಯ ಮತ್ತು ಅವರ ದುಡಿಮೆ, ಶ್ರಮದಿಂದ ನಾನಿಂದು ಈ ಮಟ್ಟಕ್ಕೆ ಬಂದಿದ್ದೇನೆ. ಜನತೆಯ ಆಶೀರ್ವಾದ ನನ್ನ ಮೇಲೆ ಇದೆ. ನನ್ನ ತಂದೆಯ ಕನಸು ರಾಜ್ಯದ ಜನರ ಪರಿಸ್ಥಿತಿ ಉತ್ತಮವಾಗಬೇಕೆಂದು ಅದಕ್ಕಾಗಿ ನಾನು ಶ್ರಮಿಸಬೇಕಿದೆ ಎಂದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಚನ್ನರಾಯಪಟ್ಟಣ, ಹೊಳೆನರಸೀಪುರ ಮಾರ್ಗ ಕುಶಾಲನಗರದ ರೈಲ್ವೇ ವಿಸ್ತಾರಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರಯತ್ನದ ಫಲ ಕೈಗೂಡುವ ಕಾಲ ಸನ್ನಿಹತವಾಗಿದೆ. ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯ ಈ ಪ್ರದೇಶದ ಜನತೆಗೆ ಏತ ನೀರಾವರಿ ಯೋಜನೆಯ ನಾಲೆಗಳ ಅಭಿವೃದ್ಧಿಗಾಗಿ 450 ಕೋಟಿ ರೂ. ಹೈ ಲೆವಲ್ ಬಲದಂಡೆ ನಾಲೆ ಅಭಿವೃದ್ಧಿಗೆ ಮತ್ತೆ 450 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊಸಳೆಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ 60 ಸೀಟುಗಳಿತ್ತು. ಪ್ರಸ್ತುತ 90 ಸೀಟುಗಳಿಗೆ ಹೆಚ್ಚುವರಿಗೊಳಿಸಿ ಅನುಮತಿ ಕೊಡಿಸಿದ್ದೇನೆ. ಕೃತಕ ಬುದ್ಧಿಮತ್ತೆ, ಇನ್ನಿತರ ಸೀಟುಗಳನ್ನು ಹೆಚ್ಚುವರಿಯಾಗಿ ಅನುಮತಿ ದೊರತಿದೆ. ವಿದ್ಯಾರ್ಥಿಗಳು ಅವಕಾಶವನ್ನು ಪಡೆದುಕೊಳ್ಳಬೇಕು ಎಂದರು.
ಕೊಡ್ಲಿಪೇಟೆಯ ಕಿರುಕೊಡ್ಲಿ ಮಠದ ಶ್ರೀ ಸಾಂಬಸದಾಶಿವಸ್ವಾಮಿ, ಅರಕಲಗೂಡಿನ ಚಿಲುಮೆಮಠದ ಶ್ರೀಜೈದೇವಸ್ವಾಮೀಜಿ, ಬಸವಾಪಟ್ಟಣದ ತೋಟದಾರ್ಯಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಪಕ್ಷದ ಮುಖಂಡ ಬೆಮ್ಮತ್ತಿ ಸುರೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಬಿ.ವಿಶ್ವನಾಥ್, ಗ್ರಾಮದ ಮುಖಂಡರಾದ ಅಣ್ಣಾಜಪ್ಪ, ನಂಜೇಗೌಡ ಹಾಗೂ ದೇವರಾಜೇಗೌಡ ಉಪಸ್ಥಿತರಿದ್ದರು.