ಬೇಲೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ದಸಂಸ(ಅಂಬೇಢ್ಕರ್ ವಾದ)ತಾಲೂಕು ಸಮಿತಿ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.
- ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವಿಭಾಗೀಯ ಸಂಘಟನಾ ಸಂಚಾಲಕ ಲಕ್ಷ್ಮಣ್
- ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಸದಸ್ಯತ್ವ ಅಭಿಯಾನ
ಬೇಲೂರು: ಶಿಕ್ಷಣ, ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ವಿಶ್ವದ ಏಕೈಕ ಯುದ್ಧವೆಂದರೆ ಭೀಮಾ ಕೋರೆಗಾಂವ್ ಯುದ್ಧ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವಿಭಾಗೀಯ ಸಂಘಟನಾ ಸಂಚಾಲಕ ಲಕ್ಷ್ಮಣ್ ಹೇಳಿದರು.
ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಸದಸ್ಯತ್ವ ಅಭಿಯಾನ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಗುರುವಾರ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸಿ, ವಿಜಯೋತ್ಸವ ಆಚರಿಸಿ ಮಾತನಾಡಿದರು. 1818 ಜ.1ರಂದು ಭೀಮಾ ಕೋರೆಗಾಂವ್‌ನಲ್ಲಿ ವೀರ ಯೋಧರು ಶೋಷಿತರ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಅಸ್ಪಶ್ಯ ಸಮುದಾಯಗಳಿಗೆ ಹಕ್ಕು ದೊರಕಿಸಿಕೊಟ್ಟ ಚಾರಿತ್ರಿಕ ದಿನವಾಗಿದೆ ಎಂದರು.
ಪೂನಾದಲ್ಲಿ 208 ವರ್ಷಗಳ ಹಿಂದೆ ಅಸ್ಪೃಶ್ಯರ ಬದುಕು ಹೀನಾಯ ಸ್ಥಿತಿಯಲ್ಲಿತ್ತು. ಮೇಲ್ಜಾತಿಯವರ ಮೇಲೆ ತಮ್ಮ ನೆರಳು ಬೀಳದಂತೆ ಅಸ್ಪಶ್ಯ ಸಮಾಜದವರು ಸೊಂಟಕ್ಕೆ ಪೊರಕೆ, ಕೊರಳಿಗೆ ಮಡಕೆ ಕಟ್ಟಿಕೊಂಡು ಓಡಾಡುವಂತೆ ಪೇಶ್ವೆಗಳ ಆಡಳಿತದಲ್ಲಿ ಶಾಸನ ವಿಧಿಸಲಾಗಿತ್ತು. ಈ ಕರಾಳ ಶಾಸನದಿಂದ ಬಿಡುಗಡೆಗೊಳ್ಳಲು ಮಹರ್ ಯೋಧರು ಬ್ರಿಟಿಷ್ ಸರ್ಕಾರದೊಂದಿಗೆ ಪೇಶ್ವೆ ಬಾಜಿರಾಯನ 28 ಸಾವಿರ ಸೈನಿಕರ ವಿರುದ್ಧ ಹೋರಾಡಿ ಗೆಲುವು ಸಾಧಿಸಿದರು. ಈ ಇತಿಹಾಸ ಯಾರಿಗೂ ಕಾಣದಂತೆ ಭಾರತದ ಇತಿಹಾಸಕಾರರು ಮುಚ್ಚಿಟ್ಟಿದ್ದನ್ನು ಡಾ.ಅಂಬೇಡ್ಕರ್ ಅವರು ಹೊರ ತೆಗೆದು ಅಸ್ಪಶ್ಯರಿಗೆ ಸ್ಫೂರ್ತಿ ತುಂಬಿದರು ಎಂದು ಸ್ಮರಿಸಿದರು.
ದಸಂಸ(ಅಂಬೇಡ್ಕರ್ ವಾದ)ತಾಲೂಕು ಸಂಘಟನಾ ಸಂಚಾಲಕರಾದ ಧರ್ಮಯ್ಯ, ಭದ್ರಯ್ಯ, ವಸಂತ ಕುಮಾರ್, ಪ್ರವೀಣ್, ಮಲ್ಲೇಶ್, ಮುಖಂಡರಾದ ದೇವರಾಜು, ಆಟೋ ಲಕ್ಷ್ಮಣ್, ಸುರೇಶ್, ಜಗಧೀಶ್, ಚಂದ್ರಪ್ಪ, ಅಶೋಕ್, ಮಂಜಣ್ಣ, ಓಂಕಾರ್, ಹರೀಶ್, ಸಿದ್ದೇಶ್, ನಂದೀಶ್, ಜಗಧೀಶ್, ಚಂದ್ರಶೇಖರ್, ಧರ್ಮ, ಗಾಯತ್ರಿ ಸೇರಿದಂತೆ ಇತರರಿದ್ದರು.