ಬೇಲೂರು :ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಅಡ್ಡ ಮತದಾನ ಮಾಡಿದ್ದೇನೆಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ನಾನು ಭಾರತೀಯ ಜನತಾ ಪಕ್ಷವನ್ನು ಮಾತೃ ಸ್ವರೂಪಿಯಾಗಿ ಗೌರವಿಸುತ್ತೇನೆ. ನನ್ನ ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಜತೆಗೆ ಆಸೆ, ಆಮಿಷಗಳಿಗೆ ಒಳಗಾಗಿಲ್ಲ. ನಾನೇ ಆರ್ಥಿಕವಾಗಿ ಸದೃಢನಾಗಿದ್ದೇನೆ. ಎರಡು ಚುನಾವಣೆ ಸೋತರೂ ಯಾವುದಕ್ಕೂ ಬಲಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಬೇಲೂರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರಿಂದ 2023ರಲ್ಲಿ ಶಾಸಕನಾಗಿದ್ದೇನೆ. ಅಂತಹ ಮಹಾನ್ ವ್ಯಕ್ತಿ ಮುನ್ನಡೆಸುವ ಪಕ್ಷದ ವಿರುದ್ಧ ಅಡ್ಡಮತದಾನ ಮಾಡಿದರೆ ನನ್ನನ್ನು ಭಗವಂತನೂ ಕ್ಷಮಿಸುವುದಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಡ್ಡ ಮತದಾನ ಮಾಡಿಲ್ಲ ಎಂದು ನಾನು ಧರ್ಮಸ್ಥಳದ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನನ್ನ ಘನತೆ ಮತ್ತು ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಆದೇಶದ ಪ್ರಕಾರ ಮೊದಲನೇ ಪ್ರಾಶಸ್ತ್ಯ ಮತವನ್ನು ಪಕ್ಷದ ಲಿಂಗರಾಜು ಪಟೇಲ್, ಜನತಾದಳದ ಗೋವಿಂದರಾಜು ಅವರಿಗೆ ಎರಡನೇ ಪ್ರಾಶಸ್ತ್ಯ ಮತ ಚಲಾಯಿಸಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ದೊಡ್ಡಗೌಡನ ಪಟೇಲ್ ಮತ್ತು ಅಭ್ಯರ್ಥಿ ಲಿಂಗರಾಜು ಪಟೇಲ್‌ರೊಡನೆ ಮತಕೇಂದ್ರಕ್ಕೆ ಹೋಗಿರುವುದು. ಈ ಬಗ್ಗೆ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಸತ್ಯಶೋಧನಾ ಸಮಿತಿ ರಚಿಸಿ ಪರಿಶೀಲಿಸಿ ನನ್ನ ಬಗ್ಗೆ ಅಪಪ್ರಚಾರ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಾಧ್ಯಕ್ಷರಲ್ಲಿ ಅನುಮತಿ ಕೋರಿದ್ದೇನೆ ಎಂದು ತಿಳಿಸಿದ್ದಾರೆ.