ಸ್ವರೂಪ್ ಪ್ರಕಾಶ್ 
ಹಾಸನ

ಜೆಡಿಎಸ್ ಪಕ್ಷದ ಮೇಲೆ ಆರೋಪ ಹಾಸ್ಯಾಸ್ಪದ

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಪಕ್ಷದ ಮೇಲೆ ಆರೋಪ ಹಾಸ್ಯಾಸ್ಪದ
  • ಕಾಂಗ್ರೆಸ್ ಮುಖಂಡರ ವಿರುದ್ಧ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಲೇವಡಿ
ಹಾಸನ: ಜೆಡಿಎಸ್ ಪಕ್ಷದ ಬಗ್ಗೆ ಜಿಲ್ಲೆಯ ಕೆಲ ಕಾಂಗ್ರೆಸ್ ಹಾಲಿ, ಮಾಜಿ ಶಾಸಕರು ಮಾಡುತ್ತಿರುವ ಆರೋಪ ಹಾಸ್ಯಾಸ್ಪದ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಲೇವಡಿ ಮಾಡಿದರು.
ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಅವರ ಟೀಕೆ ಹತಾಶೆಯ ಪ್ರತೀಕ. ಸಚಿವರು ಬಂದಾಗ ಅವರ ಹಿಂದೆ ಓಡಾಡುವುದನ್ನು ಬಿಟ್ಟು, ಅಭಿವೃದ್ಧಿ ಕೆಲಸ-ಕಾರ್ಯ ಮಾಡಿಸಲಿ. ಅವರು ಎಂಎಲ್‌ಸಿಯಾಗಲು ಯಾರಿಗೆಲ್ಲ ಕರೆ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಲಿ, ಅವಧಿ ಮುಗಿದ ನಂತರ ಶಂಕರ್ ಅವರನ್ನು ಕಣಕ್ಕಿಳಿಸಿ ತಾವು ಸುಮ್ಮನಾದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಅವರಿಗೂ ಜವಾಬ್ದಾರಿ ಇದೆ. ಸಚಿವರನ್ನು ಹಿಡಿದು ಕೆಲಸ ಮಾಡಿ ತೋರಿಸಲಿ, ಬದಲಾಗಿ ಅವರ ಬಾಲ ಹಿಡಿದುಕೊಂಡು ಸುತ್ತಾಡುವುದಲ್ಲ, ನಮ್ಮ ಪಕ್ಷದ ಮಾತು ಅವರಿಗೆ ಬೇಡ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆಯೂ ಅಸಮಾಧಾನ ಹೊರ ಹಾಕಿದ ಸ್ವರೂಪ್, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ರಸ್ತೆ ಹಾಳಾಗಿವೆ, ನಾಡಕಚೇರಿಯಲ್ಲಿ ರೈತರ ಕೆಲಸ ಆಗುತ್ತಿಲ್ಲ. ಬಜೆಟ್ ಬಗ್ಗೆ ಸಭೆ ನಡೆಸಿಲ್ಲ. ಗಣರಾಜ್ಯೋತ್ಸವ ದಿನದಂದು ಅವರು ಸಂದೇಶ ನೀಡುವ ಬದಲು ಕೇಂದ್ರ ಸರ್ಕಾರ ಬಯ್ಯುವುದರಲ್ಲೇ ಸಮಯ ಮುಗಿಸಿದರು. ನಾನು ಅಧ್ಯಕ್ಷತೆ ವಹಿಸಿದ್ದ ಕಾರಣ ಹೊರ ಹೋಗದೆ ಅನಿವಾರ್ಯವಾಗಿ ಕುಳಿತೆ ಎಂದರು.
ಜೆಡಿಎಸ್ ಸಮಾವೇಶ ನಮ್ಮ ಮನೆಯ, ಪಕ್ಷದ ಕಾರ್ಯಕ್ರಮ. ಯಾರು ನಿಲ್ಲುವುದು, ಕೂರುವುದು ಮುಖ್ಯ ಅಲ್ಲ. ಯಾರು ಹೈಲೈಟ್ ಆದರೂ ನಮ್ಮವರೇ ಎಂದು ಟಾಂಗ್ ಕೊಟ್ಟ ಅವರು, ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕೀಯ ಇದೆ. ಸಿಎಂ ಅವರ ಮಗ ಏನಾಗಿದ್ದಾರೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ನಮ್ಮ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ನಗರದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್ ಜನತಾ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಸುಮಾರು ಎರಡೂವರೆ ಲಕ್ಷ ಜನರು ಭಾಗಿಯಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಭಾಗಿಯಾಗಿದ್ದರು. ಇದಕ್ಕೆ ಶ್ರಮಿಸಿದ ನಿಖಿಲ್ ಕುಮಾರಸ್ವಾಮಿ, ಡಾ.ಸೂರಜ್ ರೇವಣ್ಣ, ಜಿಲ್ಲೆಯ ಎಲ್ಲ ಶಾಸಕರು, ಇತರರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರು ರೇವಣ್ಣ ಅವರೊಂದಿಗೆ ಹಗಲು-ಇರುಳು ಶ್ರಮಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಸದಸ್ಯ ಎಸ್.ಎಚ್.ವಾಸುದೇವ್ ಇದ್ದರು.