ಅರಕಲಗೂಡು ಶಂಭುನಾಥಪುರದ ಶ್ರೀ ಸ್ವಯಂಭುನಾಥ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಭೂಮಿಪೂಜೆ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಕೆ.ಆರ್.ನಗರ ಕಾಗಿನೆಲೆ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಎಚ್.ಪಿ.ಶ್ರೀಧರ್‌ಗೌಡ, ಎಸ್.ಹಿರಣ್ಣಯ್ಯ, ಎಸ್.ಪಿ.ರೇವಣ್ಣ, ಕೃಷ್ಣ, ಸೋಮಶೇಖರ್, ದೀಪು ಇತರರಿದ್ದರು.
- ಶ್ರೀ ಶಿವಾನಂದಪುರಿ ಸ್ವಾಮೀಜಿ ಅಭಿಮತ ದೇಗುಲ ಜೀರ್ಣೋದ್ಧಾರಕ್ಕೆ ಭೂಮಿಪೂಜೆ
ಅರಕಲಗೂಡು: ಮನುಷ್ಯನಿಗೆ ಧಾರ್ಮಿಕ ಕಾರ್ಯಗಳಂತಹ ಸತ್ಕಾರ್ಯಗಳಿಂದ ದೈವತ್ವ ಪ್ರಾಪ್ತಿಯಾಗಿ ಬದುಕಿನಲ್ಲಿ ನೆಮ್ಮದಿ, ಸಂತೃಪ್ತಿ ಮತ್ತು ಪುಣ್ಯ ಲಭಿಸುತ್ತದೆ ಎಂದು ಕೆ.ಆರ್.ನಗರ ಕಾಗಿನೆಲೆ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ನುಡಿದರು.
ಪಟ್ಟಣದ ಹೊರವಲಯದ ಶಂಭುನಾಥಪುರ ಗ್ರಾಮದ ಐತಿಹಾಸಿಕ ಶ್ರೀ ಸ್ವಯಂಭುನಾಥ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಈ ದೇವಾಲಯವು ಶಂಕರಾಚಾರ್ಯರಿಂದ ಪೂಜಿಸಲ್ಪಟ್ಟ ಪವಿತ್ರ ಕ್ಷೇತ್ರವಾಗಿದ್ದು, ಅದರ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಪ್ರತೀಕಗಳಾಗಿವೆ. ಇಂತಹ ಪವಿತ್ರ ಕ್ಷೇತ್ರಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಮಾಡಬೇಕು. ಧಾರ್ಮಿಕ ಕಾರ್ಯಗಳಿಗೆ ನೀಡುವ ದೇಣಿಗೆ ಅಥವಾ ಸೇವೆ ವ್ಯರ್ಥವಾಗುವುದಿಲ್ಲ. ದೇವರ ಕಾರ್ಯದಲ್ಲಿ ಕೈಜೋಡಿಸಿದವರಿಗೆ ದೇವರ ಆಶೀರ್ವಾದ ದೊರೆಯುವುದರೊಂದಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಪುಣ್ಯವೂ ಲಭಿಸುತ್ತದೆ. ದುಶ್ಚಟಗಳಿಂದ ದೂರವಿದ್ದು ದೇವರ ಸಾನ್ನಿಧ್ಯದಲ್ಲಿ ಸ್ವಲ್ಪ ಸಮಯ ಕಳೆದರೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಇಂತಹ ಧಾರ್ಮಿಕ ಚಟುವಟಿಕೆ ಬದುಕಿಗೆ ಹೊಸ ಚೈತನ್ಯ ತುಂಬುವ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.
ದೇವಾಲಯದ ಜೀರ್ಣೋದ್ಧಾರ ಕಾರ್ಯದ ನೇತೃತ್ವ ವಹಿಸಿರುವ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್ ಗೌಡ ಮಾತನಾಡಿ, ದೇವರ ಅನುಗ್ರಹದಿಂದ ಈ ಪವಿತ್ರ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ದೊರೆತಿರುವುದು ತಮ್ಮ ಜೀವನದ ಸೌಭಾಗ್ಯವಾಗಿದೆ. ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಗ್ರಾಮಸ್ಥರು, ಭಕ್ತರು ಹಾಗೂ ದಾನಿಗಳು ಎಲ್ಲರೂ ಕೈಜೋಡಿಸಬೇಕು. ಎಲ್ಲರ ಸಹಕಾರದಿಂದ ಈ ದೇವಾಲಯವನ್ನು ಮಾದರಿ ಧಾರ್ಮಿಕ ಕ್ಷೇತ್ರವನ್ನಾಗಿ ರೂಪಿಸುವ ಸಂಕಲ್ಪ ಹೊಂದಿದ್ದು, ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಮುಖ್ಯಸ್ಥ ಎಸ್.ಹಿರಣ್ಣಯ್ಯ, ಜಿಪಂ ಮಾಜಿ ಸದಸ್ಯ ಎಸ್.ಪಿ. ರೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಮುಖಂಡ ಪುಟ್ಟರಾಜ್ ಮಾತನಾಡಿದರು. ಜೀರ್ಣೋದ್ಧಾರ ಕಾರ್ಯಕ್ಕೆ ಎಸ್.ಪಿ. ರೇವಣ್ಣ ಒಂದು ಲಕ್ಷ ರೂ. ನೀಡಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮದ ಎಚ್.ಕೆ. ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.
ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್.ರಾಮಸ್ವಾಮಿ, ಗಣೇಶಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ಪಪಂ ಮಾಜಿ ಅಧ್ಯಕ್ಷ ಹೂವಣ್ಣ, ಮಾಜಿ ಉಪಾಧ್ಯಕ್ಷ ಸಲೀಂ, ವಕೀಲ ಕೃಷ್ಣ, ಮುಖಂಡರಾದ ಸಂಕೇಗೌಡ, ಈಶ್ವರ, ಎ.ಎಸ್. ರಂಗಸ್ವಾಮಿ, ಮಂಜೇಗೌಡ, ಅಟೋ ವಿಜಯ್ ಕುಮಾರ್, ಡೇರಿ ಮಂಜು, ವಡ್ಡರಹಳ್ಳಿ ದೀಪು, ಅಟೋ ಧರ್ಮ, ಸಂಕಪ್ಪ ಇದ್ದರು.