ಹಾಸನ ಮಹಾ ನಗರಪಾಲಿಕೆಯ ಅನುದಾನದಡಿ ನಗರದ ವಾರ್ಡ್ ನಂ.29ರ ಹುಣಸಿನಕೆರೆ ಬಡಾವಣೆಯಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದ 23 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಭೂಮಿ ಪೂಜೆ ನೆರವೇರಿಸಿದರು. ಜೆಡಿಎಸ್ ಪಕ್ಷದ ಮುಖಂಡರು, ಮಹಾ ನಗರಪಾಲಿಕೆ ಮಾಜಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಇತರರಿದ್ದರು. 
ಹಾಸನ

ದೇವಾಲಯಗಳು ಸಂಸ್ಕೃತಿ, ಪರಂಪರೆಯ ಪ್ರತೀಕ

ಪ್ರಮುಖ ಮುಖ್ಯಾಂಶಗಳು

  • ದೇವಾಲಯಗಳು ಸಂಸ್ಕೃತಿ, ಪರಂಪರೆಯ ಪ್ರತೀಕ
  • ಎಚ್.ಪಿ. ಸ್ವರೂಪ್ ಪ್ರಕಾಶ್ ಅಭಿಪ್ರಾಯ
  • ಕಾಶಿ ವಿಶ್ವನಾಥ ದೇಗುಲದ ಮೂಲಸೌಕರ್ಯ ಅಭಿವೃದ್ಧಿಗೆ ಭೂಮಿ ಪೂಜೆ
ಹಾಸನ: ಹಾಸನ ಮಹಾ ನಗರಪಾಲಿಕೆಯ ಅನುದಾನದಡಿ ನಗರದ ವಾರ್ಡ್ ನಂ.29ರ ಹುಣಸಿನಕೆರೆ ಬಡಾವಣೆಯಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದ 23 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದರು.
23 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಅಭಿವೃದ್ಧಿ ಕಾಮಗಾರಿಗಳು ದೇವಾಲಯದ ಸೌಲಭ್ಯಗಳನ್ನು ವಿಸ್ತರಿಸುವುದರ ಜತೆಗೆ ಬಡಾವಣೆಯ ಅಭಿವೃದ್ಧಿಗೂ ಸಹಕಾರಿಯಾಗಲಿವೆ ಎಂದರು.
ಹಾಸನ ನಗರಸಭೆ, ಮಹಾನಗರಪಾಲಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಪ್ರತಿಯೊಂದು ವಾರ್ಡ್‌ಗೂ ಸಮಾನವಾಗಿ ಅಭಿವೃದ್ಧಿ ಕಾಮಗಾರಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಜನರಿಗೆ ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಹುಣಸಿನಕೆರೆ ಬಡಾವಣೆಯಲ್ಲಿಯೂ ಹಲವು ವರ್ಷಗಳಿಂದ ಸಾರ್ವಜನಿಕರು ಮತ್ತು ದೇವಾಲಯದ ಭಕ್ತರು ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಇಟ್ಟಿದ್ದು, ಅದಕ್ಕೆ ಸ್ಪಂದಿಸಿ ಮಹಾನಗರಪಾಲಿಕೆ ಅನುದಾನದಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಷ್ಟೇ ಅಲ್ಲದೆ ಸಮಾಜದ ಸಂಸ್ಕೃತಿ, ಪರಂಪರೆ ಮತ್ತು ಜನರ ನಂಬಿಕೆಯ ಪ್ರತೀಕಗಳಾಗಿವೆ. ಇಂತಹ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯಿಂದ ಸ್ಥಳೀಯ ಜನರಲ್ಲಿ ಆತ್ಮೀಯತೆ ಹಾಗೂ ಸಾಮಾಜಿಕ ಬಾಂಧವ್ಯ ಹೆಚ್ಚುತ್ತದೆ. ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿತ್ತು ಎಂದು ತಿಳಿಸಿದರು.
ಸುಮಾರು 23 ಲಕ್ಷ ರೂ. ನಲ್ಲಿ ದೇವಾಲಯ ಆವರಣ ಅಭಿವೃದ್ಧಿ, ಕಾಂಕ್ರಿಟ್ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಹಾಗೂ ಇತರ ಅಗತ್ಯ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ಹಾಸನ ನಗರ ಮುಂದಿನ ದಿನಗಳಲ್ಲಿ ಮಾದರಿ ನಗರವಾಗಿ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಹಲವು ವರ್ಷಗಳಿಂದ ದೇವಾಲಯದ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದರೂ, ಕಾಮಗಾರಿ ಕೈಗೆತ್ತಿಕೊಳ್ಳಲಾಗಿರಲಿಲ್ಲ. ಇದೀಗ ಸ್ವರೂಪ್ ಪ್ರಕಾಶ್ ಅವರು ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಸಂತಸದ ವಿಚಾರ ಎಂದು ಭಕ್ತರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಮಹಾ ನಗರಪಾಲಿಕೆ ಮಾಜಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಬಡಾವಣೆಯ ಹಿರಿಯರು, ಮಹಿಳೆಯರು, ಯುವಕರು ಹಾಗೂ ದೇವಾಲಯದ ಭಕ್ತರು ಇದ್ದರು.