ಬೆಂಗಳೂರಿನ ಆರ್.ಜಿ.ವಿ.ಕೆ ಇಂಡಿಯಾ ಸಂಸ್ಥೆಯ ತಂಡದವರು ನಗರದ ಚಂದ್ರಮೌಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು. ಶಶಿಧರ್, ಹರೀಶ್, ಪ್ರವೀಣ್, ಚಂದ್ರೇಗೌಡ ಇದ್ದರು.
ಅರಸೀಕೆರೆ: ದೇಶದ ಇತಿಹಾಸ ತಿಳಿಸುವ ಸ್ಮಾರಕಗಳ ರಕ್ಷಣೆಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಇತಿಹಾಸ ತಜ್ಞ ಹಾಗೂ ಸಂಶೋಧಕ ಶಶಿಧರ್ ಹೇಳಿದರು.
ಬೆಂಗಳೂರಿನ ಆರ್.ಜಿ.ವಿ.ಕೆ ಇಂಡಿಯಾ ಸಂಸ್ಥೆ ವತಿಯಿಂದ ತಾಲೂಕಿನ ಹೊಯ್ಸಳ ದೇವಾಲಯಗಳ ಭೇಟಿ ಮತ್ತು ಎರಡು ದಿನಗಳ ಪಾರಂಪರಿಕ ಪ್ರವಾಸ ನಿಮಿತ್ತ ನಗರದಲ್ಲಿರುವ ಹೊಯ್ಸಳರ ಕಾಲದ ಶ್ರೀ ಚಂದ್ರಮೌಳೇಶ್ವರ ಮತ್ತು ಸಹಸ್ರಕೂಟ ಜಿನಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದರು.
ಹೊಯ್ಸಳರು, ಚಾಲುಕ್ಯರು, ಕದಂಬರು ಸೇರಿದಂತೆ ಅನೇಕ ರಾಜ ಮನೆತನದವರು ತಮ್ಮ ಅವಧಿಯಲ್ಲಿ ಬೆಲೆ ಕಟ್ಟಲಾಗದ ವಾಸ್ತುಶಿಲ್ಪಗಳು, ಸ್ಮಾರಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹೊಯ್ಸಳರ ಆಡಳಿತದ ಅವಧಿಯಲ್ಲಿ ದೇವಾಲಯ, ಜಿನಾಲಯದಂತಹ 125 ಕ್ಕೂ ಹೆಚ್ಚಿನ ಸ್ಮಾರಕಗಳನ್ನು ನಿರ್ಮಿಸಿರುವುದು ದಾಖಲೆಗಳಿಂದ ದೃಢಪಟ್ಟಿದೆ. ಹಾರನಹಳ್ಳಿ, ಹುಲ್ಲೇಕೆರೆ, ಹಿರಿಯೂರು, ಅರಕೆರೆ, ಜಾವಗಲ್, ಬೆಳವಾಡಿ, ಹಳೇಬೀಡು, ಹುಲಿಕೆರೆಯಲ್ಲಿ ಅದ್ಬುತ ಶಿಲ್ಪಕಲೆಯ ಭಂಡಾರವನ್ನೇ ಕಾಣಬಹುದು. ಅರಸೀಕೆರೆ ಹೊಯ್ಸಳರ ಕಾಲದ ಶಿವಾಲಯ ಅತ್ಯದ್ಬುತ ತಂತ್ರಜ್ಞಾನದಿಂದ ನಿರ್ಮಿಸಿದ್ದು ಅಧ್ಯಯನ ಮಾಡಿದಷ್ಟು ಹೊಸ ಹೊಸ ಮಾಹಿತಿಗಳು ದೊರೆಯುತ್ತವೆ ಎಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಸ್ಥಳೀಯ ಸ್ಮಾರಕಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ನಮ್ಮ ಪರಂಪರೆ, ಸಂಸ್ಕೃತಿಗಳ ಪರಿಚಯ ಮಕ್ಕಳಿಗೆ ಅರಿವಾಗುತ್ತದೆ. ಭವ್ಯ ಭಾರತದ ಶಿಲ್ಪಕಲೆಗಳ ಇತಿಹಾಸವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡದಿದ್ದಲ್ಲಿ ಮುಂದಿನ ಪೀಳಿಗೆಗೆ ವಂಚನೆ ಮಾಡಿದಂತೆ. ನಮ್ಮ ಗ್ರಾಮಗಳಲ್ಲಿ ಹುದುಗಿರುವ ಸ್ಮಾರಕಗಳನ್ನು ಪತ್ತೆ ಹಚ್ಚೋಣ. ಶ್ರೀಮಂತಿಕೆಯ ಕಲಾವೈಭವ ಮತ್ತೊಮ್ಮೆ ವಿಶ್ವಕ್ಕೆ ಪರಿಚಯಿಸೋಣ ಎಂದರು.
ಆರ್.ಜಿ.ವಿ.ಕೆ ಉಪಾಧ್ಯಕ್ಷ ಟಿ.ಎನ್.ಪ್ರವೀಣ್ ಮಾತನಾಡಿ, ಸಂಸ್ಥೆಯು 20 ವರ್ಷಗಳಿಂದ ರಾಜ್ಯದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಸ್ಮಾರಕಗಳು ಮತ್ತು ದೇವಾಲಯಗಳನ್ನು ಹೆರಿಟೇಜ್ ಮೂಲಕ ಪರಿಚಯಿಸುತ್ತಿದೆ. ಅಧ್ಯಕ್ಷ ಟಿ.ಸಿ.ನಾಗರಾಜು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸೇವಾ ಕಾರ್ಯದೊಂದಿಗೆ ರಾಷ್ಟ್ರೀಯ ಗ್ರಾಮೀಣ ವಿಕಾಸ ಕೇಂದ್ರ ಎಂಬ ಹೆಸರಿನಲ್ಲಿ ಸ್ಮಾರಕಗಳು, ಹೊಯ್ಸಳರ ವಾಸ್ತುಶಿಲ್ಪ, ಪ್ರಾಚೀನ ದೇವಾಲಯಗಳು, ಬಸದಿಗಳು, ಕಲ್ಯಾಣಿಗಳು, ಶಿಲಾಶಾಸನಗಳು, ವೀರಗಲ್ಲುಗಳ ವೀಕ್ಷಣೆ ಹಾಗೂ ಮಾಹಿತಿಯಿಂದ ವಂಚಿತರಾದವರಿಗೆ ಪ್ರವಾಸದ ಮೂಲಕ ಜಾಗೃತಗೊಳಿಸುತ್ತಿದ್ದೇವೆ ಎಂದರು.
ನಾವು ಭೇಟಿ ನೀಡುವ ಸ್ಮಾರಕಗಳ ಸ್ಥಿತಿ ಗತಿ ಮತ್ತು ಅಭಿವೃದ್ಧಿ ಬಗ್ಗೆ ಭಾರತೀಯ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ ಗಮನ ಸೆಳೆದು ಅಭಿವೃದ್ಧಿಪಡಿಸಲು ಪತ್ರ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಸ್ಥಳಿಯರು ನಿಮ್ಮ ಗ್ರಾಮಗಳಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.
ಸಂಶೋಧಕ ಡಾ.ಹರೀಶ್, ಪ್ರಾಚ್ಯವಸ್ತು ಇಲಾಖೆಯ ಚಂದ್ರೇಗೌಡ, ಆರ್ಟ್ ಆಫ್ ಲೀವಿಂಗ್‌ನ ಗುರುಮೂರ್ತಿ ಜವಳಿ, ಸಹಸ್ರ ಜಿನಾಲಯ ಅಧ್ಯಕ್ಷ ಜೆ.ಕಾಂತರಾಜು, ಅಪರಾಜಿತ ಹಾಜರಿದ್ದರು.