ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಶನಿವಾರ ಹಿಂದೂ ಸಮಾಜೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯನ್ನು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಸುಮಂತ್, ಗೋಪಾಲ ಕೃಷ್ಣೇಗೌಡ ಇದ್ದರು.
- ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕಿವಿಮಾತು
ಅರಕಲಗೂಡು: ಭಾರತೀಯರಲ್ಲಿ ಮೇಲು- ಕೀಳು ಭಾವನೆ ಹೋಗಲಾಡಿಸಿ ಎಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಸಿಕೊಂಡರೆ ಸಂತೋಷದಿಂದ ಜೀವನ ಸಾಗಿಸಬಹುದು ಎಂದು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಶನಿವಾರ ಹಿಂದೂ ಸಮಾಜೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಲವು ಧರ್ಮಗಳಿದ್ದು, ಮಠ ಮಾನ್ಯಗಳು ಮನುಕುಲ ಉದ್ಧಾರಕ್ಕಾಗಿ ಶ್ರಮಿಸಬೇಕಿದೆ. ಪ್ರಕೃತಿಯನ್ನು ಗೌರವಿಸಬೇಕು. ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಿ ಆಚರಣೆಗೆ ತರಬೇಕು. ಇದರಿಂದ ಆತ್ಮಶಕ್ತಿ ಹೆಚ್ಚಿ ಜೀವನ ಗೆಲ್ಲಬಹುದು ಎಂದರು.
ಹಿಂದೂ ಸಮಾಜದ ಸಾಮಾಜಿಕ ಕಾರ್ಯಕರ್ತ ಸುಮಂತ್ ಮಾತನಾಡಿ, ದೇಶದ ಸಂಸ್ಕೃತಿ ಮೇಲೆ ಸಾವಿರಾರು ವರ್ಷಗಳ ಕಾಲ ಇಸ್ಲಾಂ ದಾಳಿ ದಬ್ಬಾಳಿಕೆ ನಡೆದಿದೆ. ರೋಮ್ ಸಾಮ್ರಾಜ್ಯ ಸಂಪತ್ತು ಮೀರಿಸುತ್ತಿದ್ದ ವಿಜಯನಗರ ಪತನವಾಗಿದೆ. ಇಸ್ಲಾಂ ದಾಳಿಯನ್ನು ಭಾರತ ಯಶಸ್ವಿಯಾಗಿ ಎದುರಿಸಿದೆ. ಪುಲ್ವಾಮಾ ದುರಂತ ನಂತರ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಹೊಡೆದಿದೆ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ಈಗ ತಗ್ಗಿವೆ. ಹಿಂದೂ ಸಂಸ್ಕೃತಿ ಉಳಿಸಲು ಎಲ್ಲರೂ ಮುಂದಾಗಬೇಕು ಎಂದರು.
ಆರ್‌ಎಸ್‌ಎಸ್ ಹಿರಿಯ ಮುಖಂಡ ಗೋಪಾಲ ಕೃಷ್ಣೇಗೌಡ ಮಾತನಾಡಿ, ದೇಶ ರಕ್ಷಣೆ ಮುಖ್ಯ. ಎಲ್ಲ ಮಠಾಧೀಶರು ಹಿಂದೂ ಧರ್ಮದಲ್ಲಿ ಇರುವ ಎಲ್ಲ ಜಾತಿಗಳನ್ನು ಒಂದುಗೂಡಿಸುವ ಕಾಯಕ ಕೈಗೊಳ್ಳಬೇಕು. ಬಾಂಗ್ಲಾ ನುಸುಳುಕೋರರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರತಿಪಾದಿಸಿದರು.
ಚಿತ್ರ ಶೀರ್ಷಿಕೆ - ಎಆರ್‌ಕೆ-ಹಿಂದೂ ಸಮಾಜ