ಬೇಲೂರಿನ ರೋಟರಿ ಕ್ಲಬ್‌ನಿಂದ ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಶಿಕ್ಷಕರು  
ಹಾಸನ

ಶಿಕ್ಷಕರು ಆರೋಗ್ಯದ ಕಡೆ ಕಾಳಜಿ ವಹಿಸಲಿ

ಪ್ರಮುಖ ಮುಖ್ಯಾಂಶಗಳು

  • ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಸಲಹೆ
ಬೇಲೂರು: ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾಗಿದ್ದು, ಪ್ರತಿದಿನ ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತು ಒತ್ತಡದ ನಡುವೆ ಕಾರ್ಯನಿರ್ವಹಿಸುವ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಹೇಳಿದರು.
ಬೇಲೂರಿನ ರೋಟರಿ ಕ್ಲಬ್‌ನಿಂದ ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಾಗಿ ಆಯೋಜಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಸಂಕ್ರಾಮಿಕ ರೋಗಗಳ(ಎನ್‌ಸಿಡಿ)ವಿಭಾಗದ ಸಹಯೋಗದೊಂದಿಗೆ ರಕ್ತದೊತ್ತಡ ಮತ್ತು ಮಧುಮೇಹ ಉಚಿತ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ತಮ್ಮ ವೃತ್ತಿಯ ಒತ್ತಡ ಮತ್ತು ಜವಾಬ್ದಾರಿಗಳ ನಡುವೆ ಅನೇಕ ಬಾರಿ ಸ್ವಂತ ಆರೋಗ್ಯವನ್ನು ಕಡೆಗಣಿಸುವ ಪರಿಸ್ಥಿತಿ ಉಂಟಾಗುತ್ತದೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ಪ್ರತಿದಿನ ವ್ಯಾಯಾಮ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಅಸಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಬಹುದು. ಆರೋಗ್ಯವಂತ ಶಿಕ್ಷಕರಿಂದಲೇ ಆರೋಗ್ಯವಂತ ವಿದ್ಯಾರ್ಥಿಗಳು ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪೂರ್ಣಪ್ರಜ್ಞ ಶಾಲೆ ಪ್ರಾಂಶುಪಾಲ ಪ್ರಶಾಂತ್‌ಕುಮಾರ್ ಮಾತನಾಡಿ, ಶಿಕ್ಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶಾಲೆಯಲ್ಲಿಯೇ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಿರುವ ರೋಟರಿ ಕ್ಲಬ್‌ನ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಶಿಕ್ಷಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜತೆಗೆ ಸಮಯೋಚಿತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಅಸಂಕ್ರಾಮಿಕ ರೋಗಗಳ(ಎನ್‌ಸಿಡಿ)ವಿಭಾಗದ ಕೌನ್ಸಿಲರ್ ಆಲೇಶ್ ಮಾತನಾಡಿ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಂತಹ ಅಸಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಸಾರ್ವಜನಿಕರು ಸರ್ಕಾರದ ಈ ಉಚಿತ ಸೇವೆಗಳ ಸದುಪಯೋಗ ಪಡೆದು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ, ಸದಸ್ಯರಾದ ವೈ.ಡಿ.ಲೋಕೇಶ್, ಪುಟ್ಟು, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಶ್ರೀವಿದ್ಯಾ, ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಧನಂಜಯ್, ಎನ್‌ಸಿಡಿ ವಿಭಾಗದ ಸಿಬ್ಬಂದಿ ಪೂರ್ಣೇಶ್, ಜಯಶ್ರೀ, ಕೇಶವ ಧರಣಿ ಸೇರಿದಂತೆ ಇತರರಿದ್ದರು.