ಬೇಲೂರು ತಾಲೂಕಿನ ಚಿಕ್ಕಮೇದರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಹಮತ್ ಉಲ್ಲಾ ಅವರನ್ನು ಸನ್ಮಾನಿಸಲಾಯಿತು. ಬಿ.ಬಿ.ಶಿವರಾಜು, ಮುರಳಿ, ರಾಘವೇಂದ್ರ, ಮಾಜಿ ಕಾರ್ಯದರ್ಶಿ ಲೋಕೇಶ್, ಸದಸ್ಯ ಪುಟ್ಟು ರೇವಣ್ಣ ಇತರರಿದ್ದರು.  
ಹಾಸನ

ಶಿಕ್ಷಕರ ಸೇವೆ ಸದಾ ಸ್ಮರಣೀಯ

ಎ. ಆರ್. ರಘುರಾಮ
ಬೇಲೂರು : ಶಿಕ್ಷಕರು ನಿವೃತ್ತಿಯಾದರೂ ಅವರು ವಿದ್ಯಾರ್ಥಿಗಳಿಗೆ ಕಲಿಸಿದ ವಿದ್ಯೆ, ಸಮಾಜಕ್ಕೆ ನೀಡಿದ ಸೇವೆ ಎಂದಿಗೂ ಸ್ಮರಣೀಯವಾಗಿರುತ್ತದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಹೇಳಿದರು.
ತಾಲೂಕಿನ ಚಿಕ್ಕಮೇದರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಹಮತ್ ಉಲ್ಲಾ ಅವರ ನಿವೃತ್ತಿ ಅಂಗವಾಗಿ ಶುಕ್ರವಾರ ಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಹಲವು ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ ಶಿಕ್ಷಕ ರಹಮತ್ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಜಾತಿ, ವರ್ಗ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣದ ಅವಕಾಶ ಕಲ್ಪಿಸಿದ್ದಾರೆ ಎಂದರು.
ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ವಿಶ್ವಾಸ ಗಳಿಸಬಹುದು ಎಂಬುದನ್ನು ರಹಮತ್ ಸಾಬೀತುಪಡಿಸಿದ್ದಾರೆ. ಚಿಕ್ಕಮೇದೂರು ಶಾಲೆಯನ್ನು ತಾಲೂಕಿನಲ್ಲೆ ಮಾದರಿ ಸರ್ಕಾರಿ ಶಾಲೆಯಾಗಿ ರೂಪಿಸುವಲ್ಲಿ ಅವರ ಪರಿಶ್ರಮ, ಶಿಸ್ತು, ದೂರದೃಷ್ಟಿ ಹಾಗೂ ಆಡಳಿತ ಸಾಮರ್ಥ್ಯ ಮಹತ್ವದ್ದಾಗಿದೆ ಎಂದು ಶಿವರಾಜು ಹೇಳಿದರು.
ರೋಟರಿ ಕ್ಲಬ್ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ. ಈ ಶಾಲೆಗೆ ಸ್ಮಾರ್ಟ್ ಟಿವಿ, ಕುಡಿಯುವ ನೀರಿನ ಘಟಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಮುಂಬರುವ ದಿನಗಳಲ್ಲಿಯೂ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಎಸ್‌ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮುರಳಿ.ಜಿ.ಎಲ್. ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ರಹಮತ್ ಉಲ್ಲಾ, ಈ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದೇ ಜೀವನದ ಅಮೂಲ್ಯ ಕ್ಷಣವಾಗಿದೆ ಎಂದರು. ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳ ಸಂಘ, ಪೋಷಕರು, ಗ್ರಾಮಸ್ಥರು, ಸಹ ಶಿಕ್ಷಕರು ಶಾಲೆಯನ್ನು ತಮ್ಮ ಮನೆಯಂತೆ ಕಂಡು ಪ್ರತಿಯೊಂದು ಕಾರ್ಯದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಸಹಕಾರದಿಂದಲೇ ಶಾಲೆ ಇಂದು ಶೈಕ್ಷಣಿಕ ಮತ್ತು ಭೌತಿಕವಾಗಿ ಉತ್ತಮ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ, ಮಾಜಿ ಕಾರ್ಯದರ್ಶಿ ಲೋಕೇಶ್, ಸದಸ್ಯ ಪುಟ್ಟು ರೇವಣ್ಣಗೌಡ, ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.