ಬೇಲೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಅರಕಲಗೂಡು ದೊಡ್ಡಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪುಷ್ಪಗಿರಿ ಮಠದ ಶ್ರೀಸೋಮಶೇಖರ ಸ್ವಾಮೀಜಿ ಉದ್ಘಾಟಿಸಿದರು.
- ಅರಣ್ಯ ಸಚಿವ ಈಶ್ವರ ಖಂಡ್ರೆ ಸಲಹೆ
- ಬೇಲೂರಿನಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಅದ್ದೂರಿ
- ದುಶ್ಚಟಗಳಿಗೆ ಬಲಿಯಾಗಿರುವವರಿಂದ ಸಮಾಜದ ಸ್ವಾಸ್ಥೃ ಹಾಳು
ಬೇಲೂರು: ಹೆಣ್ಣು, ಮಣ್ಣು ಹಾಗೂ ಹೊನ್ನಿಗಾಗಿ ಜಗತ್ತಿನಲ್ಲಿ ಸಾಕಷ್ಟು ಕ್ರಾಂತಿಗಳು ನಡೆದಿವೆ. ಆದರೆ, ಅಂಧಕಾರ, ಅಸಮಾನತೆ, ಮೌಢ್ಯ, ಜಾತೀಯತೆ ವಿರುದ್ಧ ನಡೆದ ಕ್ರಾಂತಿಯೇ ಕಲ್ಯಾಣ ಕ್ರಾಂತಿ. ಅದುವೇ ಜಗಜ್ಯೋತಿ ಬಸವೇಶ್ವರರ ಕ್ರಾಂತಿ ಎಂಬುದನ್ನು ಮಾಡಿಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ, ಯುವ ಘಟಕದ ಸಹಯೋಗದೊಂದಿಗೆ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವೇಶ್ವರರು ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆಯ ತಳಹದಿಯ ಮೇಲೆ ಸುಂದರ ಹಾಗೂ ಭವ್ಯವಾದ ಸಮಾಜ ನಿರ್ಮಿಸಬೇಕೆಂದು ವರ್ಗ ರಹಿತ, ವರ್ಣ ರಹಿತ, ಲಿಂಗ ಭೇದವಿಲ್ಲದ ಸಮ ಸಮಾಜ ನಿರ್ಮಾಣದ ಕನಸಿನೊಂದಿಗೆ ಜಾತೀಯತೆ ವಿರುದ್ಧ ಹೋರಾಟ ಮಾಡಿದವರು ಎಂದು ತಿಳಿಸಿದರು.
ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂದು ಎಲ್ಲರೂ ದುಡಿದು ತಿಂದರೆ ಪ್ರಾಮಾಣಿಕತೆ ಇರುತ್ತದೆ. ಇದೇ ಬಸವ ತತ್ವ. ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದು, ಅವರಿಗೆ ಅರಿವು ಮೂಡಿಸಿ ಬಾಲ್ಯದಿಂದಲೇ ವಚನ ಸಾಹಿತ್ಯದ ಕಲಿಸಬೇಕು. ಅಲ್ಲದೆ ಕೆಲವರು ವಚನಗಳನ್ನು ಹೇಳುತ್ತಾರೆ, ಅದರಂತೆ ನಡೆಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಬಸವಣ್ಣನವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸಮ ಸಮಾಜಕ್ಕೆ ಮುಂದಾಗಬೇಕು ಎಂದರು.
ಸಾಲುಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು 25 ಕೋಟಿ ರೂ. ಕೊಡಿಸಲು ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ. ಬೇಲೂರಿನಲ್ಲಿ ವೀರಶೈವ-ಲಿಂಗಾಯತ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸುತ್ತೇನೆ ಎಂದು ತಿಳಿಸಿದರು.
ಮಹಿಳೆಯರು ಧರ್ಮ, ಸಂಸ್ಕೃತಿ ಪಾಲಿಸಲಿ
ಬಸವೇಶ್ವರರ ಜಯಂತಿ ಆಚರಿಸುತಿದ್ದೇವೆಂದರೆ ಅವರ ವಚನಗಳು, ಆದರ್ಶಗಳು ಕಾರಣ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಹೇಳಿದರು.
12ನೇ ಶತಮಾನದಲ್ಲೇ ವಚನಗಳ ಮೂಲಕ ಸಮ ಸಮಾಜ ನಿರ್ಮಿಸಿ ಮಹಿಳೆಯರಿಗೆ ಆದ್ಯತೆ ನೀಡಿದವರೇ ಬಸವಣ್ಣ. ಮಹಿಳೆಯರಿಗೆ ಮೀಸಲಾತಿ ಸಿಕ್ಕಿದೆ ಎಂದರೆ ಅದಕ್ಕೆ ಅನುಭವ ಮಂಟಪ ಕಾರಣ. ಮನುಷ್ಯ ಜೀವನಕ್ಕೆ ಮುಕ್ತಿ ಸಿಗಬೇಕೆಂದರೆ ಬಸವಣ್ಣನವರ ಸಿದ್ಧಾಂತ ಪಾಲಿಸಬೇಕು. ಮಹಿಳೆಯರು ನಮ್ಮ ಧರ್ಮ, ಸಂಸ್ಕೃತಿಯನ್ನು ಪಾಲಿಸಬೇಕು. ನಮಗೆ ಆಭರಣವೆಂದರೆ ಇಷ್ಟಲಿಂಗ. ಅದನ್ನು ಎಲ್ಲರೂ ಪೂಜಿಸಬೇಕು. ಇಂದು ಸಮಾಜದಲ್ಲಿರುವ ಸ್ವಾರ್ಥದಿಂದಾಗಿ ಒಗ್ಗಟ್ಟು ಹಾಳಾಗುತ್ತಿದೆ. ಇಲ್ಲಿ ವೀರಶೈವ-ಲಿಂಗಾಯತ ಬೇರೆಯಲ್ಲ. ಅದು ಒಂದೇ. ನಮ್ಮಲ್ಲಿ ಉಪ ಪಂಗಡಗಳಿರಬಹುದು. ಅದಕ್ಕೆ ಅವರವರ ಕೆಲಸೆಗಳೇ ಕಾರಣ. ಆದ್ದರಿಂದ ನಾವೆಲ್ಲರೂ ಒಂದೇ ಎಂಬುದನ್ನು ತಿಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಾಸಕ ಎಚ್.ಕೆ.ಸುರೇಶ್, ಅರಕಲಗೂಡು ದೊಡ್ಡಮಠ ಹಾಗೂ ಅಭಾವಿಪ ಮಹಾಸಭಾ ಜಿಲ್ಲಾ ಗೌರವಾಧ್ಯಕ್ಷ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ಅಭಾವಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಕೌರಿ, ಜಿಲ್ಲಾಧ್ಯಕ್ಷ ನವಿಲೇ ಪರಮೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಅಧ್ಯಕ್ಷ ಬಸವರಾಜು, ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಮುಖಂಡರಾದ ಕೊರಟಿಕೆರೆ ಪ್ರಕಾಶ್, ಗ್ರಾನೈಟ್ ರಾಜಶೇಖರ್ ಇತರರು ಇದ್ದರು.
ಅಧಿಕಾರ ದಾಹ ಬಿಟ್ಟು ಹೊರಬರಲಿ
ಇತ್ತೀಚಿನ ದಿನಗಳಲ್ಲಿ ಬಸವ ಜಯಂತಿ ಅರ್ಥ ಕಳೆದುಕೊಳ್ಳುತ್ತಿದೆ. ಅಂದಿನ ವಿಚಾರಗಳಿಗೂ ಇಂದಿನ ವಿಚಾರಗಳಿಗೂ ವ್ಯತ್ಯಾಸವಿದೆ ಎಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಬಸವಣ್ಣನವರ ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂದರೆ ನಮ್ಮಲ್ಲಿರುವ ಜಾತಿ ತಾರತಮ್ಯ, ವೈಮನಸು, ಅಧಿಕಾರದ ದಾಹವನ್ನು ಬಿಟ್ಟು ಹೊರಬರಬೇಕು. ಕಾರ್ಯಕ್ರಮಗಳ ಮೂಲಕ ಧರ್ಮ ಮತ್ತು ಸಮಾಜವನ್ನು ಉಳಿಸಬೇಕು. ಇಲ್ಲದಿದ್ದಲ್ಲಿ ಧರ್ಮ, ಸಮಾಜವನ್ನು ಬೆಳೆಸಲು ಸಾಧ್ಯವಿಲ್ಲ. ಬಸವಣ್ಣರನ್ನು ಮುಂದಿಟ್ಟು ಜಗಳಕ್ಕೆ ಮುಂದಾಗುವುದು ಸರಿಯಲ್ಲ. ಎಲ್ಲರೂ ಬಸವಣ್ಣರ ವಿಚಾರಗಳನ್ನು ಅರಿತು ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ ಎಂದರು.
ಎಲ್ಲ ಜಿಲ್ಲಾ ಕೆಂದ್ರಗಳಲ್ಲೂ ವೀರಶೈವ-ಲಿಂಗಾಯತ ಭವನ, ವಿದ್ಯಾರ್ಥಿನಿಲಯ, ವಸತಿ ನಿಲಯ ಸ್ಥಾಪಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ತರಬೇತಿ ಕೇಂದ್ರ ತೆರೆಯಲು ಚಿಂತಿಸಲಾಗಿದೆ. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಪ್ರತಿಯೊಬ್ಬರೂ ಅಭಿಯಾನದ ಮೂಲಕ ಸದಸ್ಯತ್ವ ಪಡೆದು ಸಂಘಟನೆ ಮಾಡಬೇಕು.
ಆನೆಧಾಮ ನಿರ್ಮಾಣಕ್ಕೆ 2 ಸಾವಿರ ಎಕರೆ ಭೂಮಿ ಗುರುತು
ಮಾನವ-ಪ್ರಾಣಿ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿದ್ದರೆ, ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದ ನಂತರ ಪ್ರಾಣಿಗಳ ಸಂತತಿ ಹೆಚ್ಚಾಗತೊಡಗಿದೆ. ಮಾನವನ ಜೀವ ಅತ್ಯಮೂಲ್ಯವಾದದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ನಾನು ಮತ್ತು ಸರ್ಕಾರ ಎಲ್ಲ ರೀತಿಯ ಶ್ರಮ ವಹಿಸುತ್ತಿದ್ದೇವೆ. ಅಲ್ಲದೆ ರಾಜ್ಯದಲ್ಲಿ 100 ಆನೆಗಳು ಅರಣ್ಯದಿಂದ ಹೊರಗಿವೆ. ಆನೆಧಾಮ ಮಾಡಲು 2 ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಚಾಲನೆ ನೀಡುವ ಮೂಲಕ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.
ಬೆಳೆ ನಾಶ ಸೇರಿದಂತೆ ಹಾನಿಯಾಗಿರುವುದಕ್ಕೆ 60 ಕೋಟಿ ರೂ. ಪರಹಾರ ಕೊಡಲಾಗಿದೆ. ರೈಲ್ವೆ ಬ್ಯಾರಿಕೇಡ್, ಟಾಸ್ಕ್‌ಫೋಸ್, ಡ್ರೋನ್ ಕ್ಯಾಮರಾಗಳ ಜತೆಗೆ ಹೆಚ್ಚು ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.
ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಹಾಗೂ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಲೂರಿನಲ್ಲಿ ಶ್ರೀ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಜಾನಪದ ಕಲಾ ತಂಡ, ಬಸವೇಶ್ವರರು ಮತ್ತು ಅಕ್ಕಮಹಾದೇವಿ ಸೇರಿದಂತೆ ಇತರರ ಸ್ಥಬ್ದ ಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ನಾಡಪ್ರಭು ಕೆಂಪೇಗೌಡ ಮತ್ತು ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.