ಅರಕಲಗೂಡಿನಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ದೇವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎ.ಮಂಜು ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕೆ.ಸಿ.ಸೌಮ್ಯಾ, ಕೇಶವ, ಗಿರೀಶ್, ಮಂಜುನಾಥ್ ಇತರರಿದ್ದರು.
- ಶಾಸಕ ಎ.ಮಂಜು
- ತಾಲೂಕು ಕಚೇರಿ ಸಭಾಂಗಣ
ಅರಕಲಗೂಡು: ಮನುಕುಲದ ಉದ್ಧಾರಕ್ಕಾಗಿ ಸಮಾಜವನ್ನು ತಿದ್ದಿ ಸರಿದಾರಿಗೆ ತರಲು ಶ್ರಮಿಸಿದ ಮಹನೀಯರ ಆದರ್ಶ ಹಾಗೂ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕ ಎ.ಮಂಜು ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಡಿವಾಳ ಮಾಚಿದೇವ ದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ವೃತ್ತಿ ಅಥವಾ ಕಸುಬಿನ ಆಧಾರದ ಮೇಲೆ ಜಾತಿ-ಸಮುದಾಯ ರೂಪುಗೊಂಡಿತ್ತು. ಕಾಲ ಬದಲಾದಂತೆ ಈಗ ಶಿಕ್ಷಣವೇ ನಿಜವಾದ ಬದಲಾವಣೆಯ ದಾರಿಯಾಗಿದೆ. ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣ ಒಂದೇ ಮಾರ್ಗವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದರೆ ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯ ಎಂದರು.
ಪ್ರಧಾನ ಭಾಷಣ ಮಾಡಿದ ಪ್ರಾಂಶುಪಾಲ ಗಿರೀಶ್, ಸಮಾಜ ನಮಗೆ ಅನಿವಾರ್ಯ. ಆದರೆ ನಾವು ಸಮಾಜಕ್ಕೆ ಅನಿವಾರ್ಯವಲ್ಲ. ಆದ್ದರಿಂದ ನಮ್ಮ ಕುಲದೇವರು ನೀಡಿದ ಧಾರ್ಮಿಕ ನೆಲಗಟ್ಟಿನಲ್ಲಿ ಪ್ರಾಮಾಣಿಕವಾಗಿ ಬದುಕು ಕಟ್ಟಿಗೊಂಡು ಜೀವನ ಸಾಗಿಸಬೇಕು. ಇತರ ಸಮುದಾಯ ಶಿಕ್ಷಣ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ನಮ್ಮ ಸಮಾಜದವರು ಇನ್ನೂ ಹಿಂದುಳಿದಿದ್ದಾರೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು ಹೇಳಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಕೇಶವ, ಉಪಾಧ್ಯಕ್ಷ ಮಂಜುನಾಥ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ, ಬಿ.ಸಿ.ಶಶಿಧರ್, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪುಟ್ಟರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಇತರರಿದ್ದರು.