ಅರಸೀಕೆರೆ ನಗರದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜ್ಞಾನಶ್ರೀ ಎಕ್ಸ್‌ಫರ್ಟ್ ಪಿಯು ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಅರುಣ್ ಕುಮಾರ್, ನಾರಾಯಣ ರಾವ್ ಶರ್ಮಾ, ಚಂದ್ರಶೇಖರ್ ಇದ್ದರು. 
ಹಾಸನ

ಪ್ರಗತಿಯ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯ ಕುಸಿತ

ಅರಸೀಕೆರೆ: ಸಂಸ್ಕಾರ ರಹಿತ ಶಿಕ್ಷಣ ಅಂಧಕಾರಕ್ಕೆ ದಾರಿಮಾಡಿಕೊಡಲಿದೆ ಎಂಬುದನ್ನು ಅರಿತು ಉಪನ್ಯಾಸಕರು ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯಳನಡು ಸಂಸ್ಥಾನದ ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜ್ಞಾನಶ್ರೀ ಎಕ್ಸ್‌ಫರ್ಟ್ ಪಿಯು ಕಾಲೇಜಿನ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜ್ಞಾನ, ವಿಜ್ಞಾನ, ತಂತ್ರಜ್ಞಾನ ಪ್ರಗತಿ ಹೊಂದಿರುವ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಪಠ್ಯದ ಜತೆಗೆ ಉತ್ತಮ ಸಂಸ್ಕಾರ ಕೊಡುವುದು ಮೊದಲ ಆದ್ಯತೆಯಾಗಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರವೇ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯಳನಡು ಜಗದ್ಗುರು ವಿದ್ಯಾಸಂಸ್ಥೆಯ ನೌಕರರು ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಂಸ್ಕಾರ ಹೊಂದದಿದ್ದರೆ ಯಾವ ಪದವಿ, ಉದ್ಯೋಗ ಶ್ರೇಷ್ಠ ಎನಿಸುವುದಿಲ್ಲ ಎಂದರು.
ತಿಪಟೂರು ಗುರುಕುಲಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಜಾತಿ, ಧರ್ಮಗಳನ್ನು ಮೀರಿದ ತತ್ವ ಮಾನವೀಯತೆ. ಮೊದಲು ಮನುಷ್ಯರಾಗಿ ಬಾಳುವುದನ್ನು ಕಲಿಯಿರಿ ಎಂದು ಆಶೀರ್ವಚನ ನೀಡಿದರು. ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿದರು. ವಿಶ್ಲೇಷಕ ಚಂದ್ರಶೇಖರ್, ವಿದ್ಯಾರ್ಥಿಗಳಿಗೆ ಅಗತ್ಯವಾದ ಯಶಸ್ಸಿನ ಸೂತ್ರಗಳನ್ನು ಮಹಾಕಾವ್ಯಗಳ ತುಣುಕುಗಳೊಂದಿಗೆ ವಿವರಿಸಿದರು.
ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆಂಕೆರಹಳ್ಳಿ ಶಿವನಂಜೇಗೌಡ, ನಿವೃತ್ತ ಕೃಷಿ ಅಧಿಕಾರಿ ಬೋರೆಹಳ್ಳಿ ಸೋಮಶೇಖರ್, ಗಂಗಾಧರಸ್ವಾಮಿ, ವಿದ್ಯಾಶಂಕರ ಶಾಲೆಯ ಆಡಳಿತಾಧಿಕಾರಿ ನಾರಾಯಣರಾವ್ ಶರ್ಮ, ಕಾಲೇಜಿನ ಆಡಳಿತಾಧಿಕಾರಿ ಅರುಣ್ ಕುಮಾರ್, ಪ್ರಾಂಶುಪಾಲ ತೀರ್ಥಪ್ರಸಾದ್, ವಿಜ್ಞಾನ ವಿಭಾಗದ ಮುಖ್ಯಸ್ಥ ಕಿರಣ್ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ರಾಕೇಶ್ ಸೇರಿದಂತೆ ಅತ್ಯುತ್ತಮ ಶ್ರೇಣಿ ಪಡೆದ 90ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.