ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೋಕ್ಸೊ ಹಾಗೂ ಬಾಲಗರ್ಭಿಣಿಯರು ಹಾಗೂ ಮಕ್ಕಳ ಸುರಕ್ಷತೆ ಕುರಿತು ನಡೆದ ಸಭೆಯಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ಡಾ.ಅನಿಲ್, ಧರಣಿ ಕುಮಾರ್, ದಿಲೀಪ್ ಇತರರು ಇದ್ದರು. 
ಹಾಸನ

ಹೆಣ್ಣು ಮಕ್ಕಳ ಸುರಕ್ಷತೆ ಗಂಭೀರವಾಗಿ ಪರಿಗಣಿಸಿ

ಹಾಸನ: ಜಿಲ್ಲೆಯಲ್ಲಿ ಪೋಕ್ಸೊ ಹಾಗೂ ಬಾಲಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೋಕ್ಸೊ ಹಾಗೂ ಬಾಲಗರ್ಭಿಣಿಯರು ಹಾಗೂ ಮಕ್ಕಳ ಸುರಕ್ಷತೆ ಕುರಿತು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುತ್ತಾರೆ. ಹೆಣ್ಣು ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಹಿನ್ನೆಯಲ್ಲಿ ಪ್ರತಿ ಮಂಗಳವಾರ ಬೆ.11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಾಗೂ ಸಂಜೆ 7 ಗಂಟೆಗೆ ಡಿಸ್ಕಸ್ ವಿತ್ ಡಿಸಿ ಎಂಬ ಕಾರ್ಯಕ್ರಮದೊಂದಿಗೆ ವಿಡಿಯೋ ಸಂವಾದದ ಮೂಲಕ ಎಲ್ಲ ವಸತಿ ಶಾಲೆ ಮತ್ತು ವಸತಿನಿಲಯಗಳ ಮಕ್ಕಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಣ್ಣು ಮಕ್ಕಳ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ, ಉದಾಸೀನ ಮಾಡದೆ, ತೀವ್ರತೆಯನ್ನು ಅರಿತು ಸುರಕ್ಷತೆಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ನಿರ್ವಹಿಸಬೇಕು. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಬೆಳಕಿಗೆ ಬರುವುದಿಲ್ಲ. ಎಂತಹ ಸಂದರ್ಭದಲ್ಲೂ ದೃತಿಗೆಡದೆ ಧೈರ್ಯವಾಗಿ ನಡೆದ ಘಟನೆಯ ಬಗ್ಗೆ ಮುಕ್ತವಾಗಿ ಮಕ್ಕಳು ಹೇಳುವಂತೆ ಪ್ರಜ್ಞಾವಂತರನ್ನಾಗಿ ಮಾಡಬೇಕು. ಜತೆಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಅವರಿಗೆ ತರಬೇತಿ ನೀಡುವುದರ ಮೂಲಕ ಸಜ್ಜುಗೊಳಿಸಬೇಕು ಎಂದರು.
ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯದಂತಹ ವಿಷಯಗಳ ಕುರಿತು ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲಿ ಪ್ರತಿಯೊಂದು ಮಗುವಿನಿಂದ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಪ್ರಬಂಧ ಬರೆಸಲು ಕ್ರಮವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ಗ್ರಾಮ ಸಭೆಗಳಲ್ಲೂ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಬಾಲ ಗರ್ಭಿಣಿ, ಪೋಕ್ಸೊ, ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಅರಿವು ಮೂಡಿಸಬೇಕು. ತಾಂಡ, ಗೊಲ್ಲರಹಟ್ಟಿ, ಕಾಫಿ ಎಸ್ಟೇಟ್, ವಲಸೆ ಕಾರ್ಮಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ದಾಖಲಾಗಿರುವ ಹಾಗೂ ಜನವರಿಯಿಂದ ಇದುವರೆಗೆ ದಾಖಲಾಗಿರುವ ಪೋಕ್ಸೊ ಪ್ರಕರಣಗಳ ಬಗ್ಗೆ ತಾಲೂಕುವಾರು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಪೋಕ್ಸೊ ಪ್ರಕರಣಗಳಲ್ಲಿ ಕೃತ್ಯ ಯಾರಿಂದ, ಎಲ್ಲಿ, ಯಾರ ಮೇಲೆ ನಡೆದಿದೆ ಎಂಬುದರ ಬಗ್ಗೆ ಹಾಗೂ ಆ ಮಕ್ಕಳ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಧರಣಿ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಇದ್ದರು.
ಹೆಣ್ಣು ಮಕ್ಕಳು ಯಾವುದೇ ತೊಂದರೆಗೆ ಸಿಲುಕಿದಾಗ ಅಂಜದೆ, ಸಂಕೋಚ ಪಡದೆ 1098ಕ್ಕೆ ಕರೆ ಮಾಡುವಂತೆ ಅವರಿಗೆ ಧೈರ್ಯ ತುಂಬಬೇಕು. ಶಾಲೆಯಲ್ಲಿ 18 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳಲ್ಲಿ ನಿಗಾ ವಹಿಸಬೇಕು.
ಲತಾಕುಮಾರಿ ಜಿಲ್ಲಾಧಿಕಾರಿ
ಮೊದಲು ಓದು ಮುಖ್ಯ
ಪ್ರೀತಿ-ಪ್ರೇಮಕ್ಕೆ ಸಿಲುಕಿ ಹೆಣ್ಣು ಮಕ್ಕಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಮೊದಲು ಓದು ಮುಖ್ಯ, ಸರಿದಾರಿಯಲ್ಲಿ ನಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಕ್ಕಳಿಗೆ ಅರಿವು ಮೂಡಿಸಬೇಕು. ಬಾಲಗರ್ಭಿಣಿಯರಾಗುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಉಂಟಾಗುವ ದುಷ್ಪರಿಣಾಮದ ಬಗ್ಗೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಕ್ರಮವಹಿಸಬೇಕು. ಪೋಕ್ಸೊ ಪ್ರಕರಣಗಳಲ್ಲಿ ಶಿಕ್ಷೆ ಆಗುವುದರ ಬಗ್ಗೆ ಮಕ್ಕಳಿಗೆ ಕಿರುಚಿತ್ರದ ಮೂಲಕ ತಿಳಿವಳಿಕೆ ನೀಡಬೇಕು. ಆಕಾಶವಾಣಿ ಹಾಗೂ ಸ್ಥಳೀಯ ಕೇಬಲ್ ವಾಹಿನಿಗಳ ಮೂಲಕವೂ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.