ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ದೇಶಾಣಿ ಆನಂದ್ ಮಾತನಾಡಿದರು. ತಾಪಂ ಇಒ ಸತೀಶ್ ಕುಮಾರ್, ಗ್ಯಾರಂಟಿ ಸಮಿತಿ ಸದಸ್ಯ ನಿಶ್ಚಲ್ ಮಸ್ಸೂರ್, ಅಭೀಬ್, ಸತೀಶ್, ಪ್ರತಾಪ್, ಚಂದ್ರಣ್ಣ, ವಿಶಾಲಾಕ್ಷಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು. 
ಹಾಸನ

ಬಿಪಿಎಲ್ ಚೀಟಿಗಳು ಎಪಿಎಲ್ ಆಗದಂತೆ ಕ್ರಮವಹಿಸಿ

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್ ಸೂಚನೆ
  • ಅಧಿಕಾರಿಗಳೊಂದಿಗೆ ಸಭೆ
ಬೇಲೂರು: ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಯಲ್ಲಿ ಕೆಲ ಬಡವರ ಪಡಿತರ ಚೀಟಿಗಳು ಐಟಿ ಹಾಗೂ ಜಿಎಸ್‌ಟಿ ಹೆಸರಲ್ಲಿ ಎಪಿಎಲ್ ಕಾರ್ಡ್‌ಗಳಾಗಿರುವುದನ್ನು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಬಡವರ ಕಾರ್ಡ್‌ಗಳನ್ನು ಬಿಪಿಎಲ್ ಆಗಿ ಪರಿವರ್ತಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್ ಹೇಳಿದರು.
ಪಟ್ದಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ಪಡಿತರ ವಿತರಿಸಲು ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಪಡಿತರ ಪಡೆಯಲು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಜತೆಗೆ ಬಡವರ ಪಡಿತರ ಚೀಟಿಗಳು ಎಪಿಎಲ್ ಹಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ವೀಣಾ ಮಾತನಾಡಿ, ತಾಲೂಕಿನಲ್ಲಿ ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚು ಆದಾಯ ಹೊಂದಿರುವ 1320 ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ವರ್ಗಾವಣೆ ಗೊಂಡಿವೆ. ಇವುಗಳಲ್ಲಿ ಅರ್ಹ ಫಲಾನುಭವಿಗಳಿದ್ದರೆ ಅಂಥವರು ಸೂಕ್ತ ದಾಖಲೆ ನೀಡಿದರೆ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನಾಗಿ ಮಾಡಿ ಕೊಡಲಾಗುವುದು. ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ವಿಳಂಬವಾಗಿದ್ದು, ಅದನ್ನು ಸರಿ ಪಡಿಸಲಾಗಿದ್ದು ಗ್ರಾಹಕರು ಸುಗಮವಾಗಿ ಪಡಿತರ ಪಡೆಯಬಹುದಾಗಿ ಎಂದರು.
ಬಳಿಕ ಯುವನಿಧಿ ಬಗ್ಗೆ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ಸರ್ಕಾರ ಯುವಕರ ನೆರವಿಗಾಗಿ ಯುವ ನಿಧಿ ಯೋಜನೆ ಜಾರಿಗೆ ತಂದಿದ್ದು, ಬೇಲೂರು ತಾಲೂಕಿನಲ್ಲಿ ಈ ಯೋಜನೆ ನಿಗದಿತ ಗುರಿ ತಲುಪದಿರುವುದು ವಿಷಾಧದ ಸಂಗತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕಾಲೇಜುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ನಡೆಸಿ ಯುವ ನಿರುದ್ಯೋಗಿಗಳನ್ನು ಈ ಯೋಜನೆಯಲ್ಲಿ ಹೆಚ್ಚಾಗಿ ನೋಂದಾಯಿಸಿ ಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗೆ ಸೂಚಿಸಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ಟ್ರಾನ್ಸ್ ಫಾರ‌್ಮರ್‌ಗಳನ್ನು ನಿರ್ಮಾಣ ಮಾಡಲು ಸರ್ಕಾರ ಮಂಜೂರಾತಿ ನೀಡಿದ್ದು, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ವಿಳಂಬವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನ ಹರಿಸಬೇಕು. ತಾಲೂಕು ಶಿಶು ಅಭಿವೃದ್ಧಿ ಇಲಾಖೆಗೆ ಸ್ವಂತ ಕಟ್ಟಡಹೊಂದಲು ಬೇಲೂರು-ಹಳೇಬೀಡು ಪ್ರಾಧಿಕಾರದಿಂದ ನಿವೇಶನ ನೀಡುವಂತೆ ಮನವಿ ಮಾಡಲಾಗಿದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎಂದ ಅವರು, ತಾಲೂಕಿನ ಕೆಲವು ಗ್ರಾಮೀಣ ಭಾಗಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದು, ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಸುರೇಶ್ ಮಾತನಾಡಿ, ಬೇಲೂರು ಹಳೇಬೀಡು ರಸ್ತೆಯಲ್ಲಿ ಬರುವ ಶಿವಾಲದಹಳ್ಳಿಯವರು ಬಸ್ ಹತ್ತಲು ಹೆಬ್ಬಾಳು ಗ್ರಾಮಕ್ಕೆ ಬರಬೇಕಿದೆ. ಆದರೆ ಶಿವಾಲದಹಳ್ಳಿ ಗೇಟ್‌ನಲ್ಲಿ ಬಸ್ ನಿಲ್ಲಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮತ್ತು ಕಲ್ಲಳ್ಳಿ ಗಡಿಯಲ್ಲೂ ಬಸ್ ನಿಲ್ಲಿಸಿದರೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಸಹಾಯವಾಗುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ಕ್ರಮಕೈಗೊಳ್ಳ ಬೇಕೆಂದು ತಿಳಿಸಿದರು.
ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಮಹೇಶ್ ಮಾತನಾಡಿ, ತಾಲೂಕು ಕಚೇರಿ ಹತ್ತಿರ ಬಸ್ ನಿಲ್ಲಿಸುವುದರಿಂದ ಮೊದಲೇ ಮಳೆ ಬಿಸಿಲೆನ್ನದೆ ಪ್ರಯಾಣಿಕರು ನಿಂತು ಬಸ್ ಹತ್ತಬೇಕಿದೆ. ಆದರೆ ಇಲ್ಲಿಯೂ ಹೆಚ್ಚು ಜನರಿದ್ದರೆ ಚಾಲಕರು ಬಸ್ ನಿಲ್ಲಿಸದೆ ಮುಂದೆ ಹೋಗುವುದರಿಂದ ಪ್ರಯಾಣಿಕರಿಗೆ ಅನಾನೂಕೂಲವಾಗುತ್ತಿದೆ. ಅಲ್ಲದೆ ಮಹಿಳೆಯರು ಮಕ್ಕಳು ಕತ್ತಲು ಸಮಯ ಬಸ್‌ಗಾಗಿ ಕಯುವ ಸಂದರ್ಭ ಏನಾದರೂ ಅನಾಹುತವಾದರೆ ಯಾರು ಹೊಣೆ. ಆದ್ದರಿಂದ ಬಸ್‌ಗಳನ್ನು ತಾಲೂಕು ಕಚೇರಿ ಸಮೀಪವೇ ನಿಲ್ಲಿಸಲು ಸೂಚಿಸಬೇಕು ಎಂದು ಅಧಿಕಾರಿಗೆ ತಿಳಿಸಿದ ಅವರು ಗೋವಿನಹಳ್ಳಿ ಗ್ರಾಮಕ್ಕೆ ಹೆಚ್ಚುವರಿಯಾಗಿ ಬೆಳಗ್ಗೆ ಸಂಜೆ ಬಸ್ ಬಂದು ಹೋದರೆ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದರು.
ತಾಪಂ ಇಒ ಸತೀಶ್ ಕುಮಾರ್, ಗ್ಯಾರಂಟಿ ಸಮಿತಿ ಸದಸ್ಯ ನಿಶ್ಚಲ್ ಮಸ್ಸೂರ್, ಅಭೀಬ್, ಸತೀಶ್, ಪ್ರತಾಪ್, ಚಂದ್ರಣ್ಣ, ವಿಶಾಲಾಕ್ಷಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಚಿತ್ರ:29(ಬಿಎಲ್‌ಆರ್)2-