ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ 2026-27ರ ಮುಂಗಾರು ಹಂಗಾಮಿನ ರಸಗೊಬ್ಬರಗಳ ಸಮರ್ಪಕ ಸರಬರಾಜು ಮತ್ತು ವಿತರಣೆ ಕುರಿತು ಸಭೆ ನಡೆಸಿ ಎಡಿಸಿ ಜಗದೀಶ್ ಗಂಗಣ್ಣನವರ್ ಮಾತನಾಡಿದರು. ಜಂಟಿ ಕೃಷಿ ನಿರ್ದೇಶಕ ರಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ರಸಗೊಬ್ಬರ ಹಾಗೂ ಬಿತ್ತನೆ ಬೀಜ ವರ್ತಕರು ಇದ್ದರು.  
ಹಾಸನ

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇಡಲು ಕ್ರಮವಹಿಸಿ

ಪ್ರಮುಖ ಮುಖ್ಯಾಂಶಗಳು

  • ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇಡಲು ಕ್ರಮವಹಿಸಿ
  • ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್ ಸೂಚನೆ
ಹಾಸನ: ಪೂರ್ವ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಇಡಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ 2026-27ರ ಮುಂಗಾರು ಹಂಗಾಮಿನ ರಸಗೊಬ್ಬರಗಳ ಸಮರ್ಪಕ ಸರಬರಾಜು ಮತ್ತು ವಿತರಣೆ ಕುರಿತು ಸಭೆ ನಡೆಸಿ ಮಾತನಾಡಿದರು. ರಸಗೊಬ್ಬರ ಮಳಿಗೆಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು ಎಂದರು.
ರಸಗೊಬ್ಬರ ಮಳಿಗೆಗಳಲ್ಲಿ ರಸಗೊಬ್ಬರಗಳ ದಾಸ್ತಾನು ಹಾಗೂ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವುದು, ಜಿಲ್ಲೆಯ ಎಲ್ಲ ರಸಗೊಬ್ಬರ ಪರಿವೀಕ್ಷಕರು, ಕಡ್ಡಾಯವಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರ ದಾಸ್ತಾನು ಪರಿಶೀಲಿಸಬೇಕು ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ರಸಗೊಬ್ಬರ ಮಳಿಗೆಗಳಲ್ಲಿ ಹಾಲಿ ದಾಸ್ತಾನು ಇರುವ ರಸಗೊಬ್ಬರಕ್ಕೂ ಪಿಒಎಸ್ ಮಷಿನ್‌ನಲ್ಲಿರುವ ರಸಗೊಬ್ಬರಕ್ಕೆ ಹೊಲಿಕೆ ಮಾಡಿ ವ್ಯತ್ಯಾಸವಿದ್ದಲ್ಲಿ ಸರಿಪಡಿಸಬೇಕು, ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಿಒಎಸ್ ಮಷಿನ್‌ನಲ್ಲಿಯೇ ರಸಗೊಬ್ಬರಗಳನ್ನು ವಿತರಣೆ ಮಾಡಲು ಕ್ರಮವಹಿಸಿಬೇಕು ಎಂದರು.
2026-27ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿದ ರಸಗೊಬ್ಬರದಲ್ಲಿ ಸರಬರಾಜುದಾರರು ಶೇ.25 ರಷ್ಟು ರಸಗೊಬ್ಬರವನ್ನು ಕಾಪು ದಾಸ್ತಾನಿನಲ್ಲಿ ಇರಿಸಬೇಕು, ಯೂರಿಯಾ ರಸಗೊಬ್ಬರವನ್ನು ಪಿಒಎಸ್ ಮಷಿನ್ ಜತೆಗೆ ಕಡ್ಡಾಯವಾಗಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶದ ಮೂಲಕ ರೈತರ ಎಫ್‌ಐಡಿ/ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಯೂರಿಯಾ ವಿತರಿಸುವಂತೆ ನಿರ್ದೇಶನ ನೀಡುವಂತೆ ತಿಳಿಸಿದರು.
ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡುವಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸುವುದರ ಜತೆಗೆ ನೈರ್ಸಗಿಕ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ಕೃಷಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಹಾಗೂ ನ್ಯಾನೋ ಯೂರಿಯಾ ಬಳಕೆಗೆ ಉತ್ತೇಜಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವರ್ತಕರು ಉಪಸ್ಥಿತರಿದ್ದರು.