ಹಾಸನದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ರಮೇಶ್, ಡಾ.ಬಸವರಾಜು, ರಂಗಸ್ವಾಮಿ ಇತರರಿದ್ದರು.
- ಬಿಳಿಸುಳಿ ರೋಗ ಪರಿಹಾರಕ್ಕೆ ಕ್ರಮಕೈಗೊಳ್ಳಿ
- ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೂಚನೆ
ಹಾಸನ: ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ಕಳೆದ ವರ್ಷ ಬಿಳಿಸುಳಿ ರೋಗ ಕಾಣಿಸಿಕೊಂಡ ಪರಿಣಾಮ ರೈತರಿಗೆ ಆರ್ಥಿಕ ನಷ್ಟವಾಗಿತ್ತು. ಈ ಬಾರಿ ಉತ್ತಮ ಮೆಕ್ಕಜೋಳ ಬಿತ್ತನೆ ಬೀಜ ಸರಬರಾಜು ಮಾಡಲು ಹಾಗೂ ಬಿಳಿಸುಳಿ ರೋಗದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೂಚಿಸಿದರು.
ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆ ಬೀಜ ಸರಬರಾಜು ಹಾಗೂ ಬಿಳಿಸುಳಿ ರೋಗ ನಿಯಂತ್ರಿಸುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಸಮಿತಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ನಗರದ ಗಾಂಧಿ ಭವನದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ರೈತರು, ಉತ್ಪಾದಕರು, ಸರಬರಾಜುದಾರರು, ವಿತರಕರು, ಬಿತ್ತನೆ ಬೀಜ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆಯಾಗಿದ್ದ ಮೆಕ್ಕೆ ಜೋಳ ಬೆಳೆಗೆ ಬಿಳಸುಳಿ ರೋಗ ಕಾಣಿಸಿಕೊಂಡಿದ್ದು, ರೋಗ ತಡೆಯುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಮುಂಜಾಗ್ರತೆ ವಹಿಸಿ ಮಾಹಿತಿ ನೀಡಬೇಕು ಎಂದರು.
ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳ ತಂಡ ಬಿಳಿಸುಳಿ ರೋಗವು ಮಣ್ಣಿನಿಂದ ಹೆಚ್ಚಾಗಿದೆ ಎಂದು ವರದಿ ನೀಡಿದ್ದಾರೆ. ಬೆಳೆಯನ್ನು ಬೆಳದ ಭೂಮಿಯಲ್ಲಿಯೇ ಪದೇ ಪದೆ ಬೆಳೆಯುತ್ತಿರುವುದರಿಂದ ರೋಗ ಕಂಡು ಬರುತ್ತಿದೆ ಎಂದು ತಂಡ ವರದಿ ನೀಡಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ರಮೇಶ್, ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ.ಬಸವರಾಜು, ಕೃಷಿಕ ಸಮಾಜ ಅಧ್ಯಕ್ಷರಾದ ರಂಗಸ್ವಾಮಿ ಇತರರಿದ್ದರು.