ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಜಾಕ್‌ವೆಲ್ ಕಾಮಗಾರಿಯನ್ನು ಶಾಸಕ ಎ. ಮಂಜು ಪರಿಶೀಲಿಸಿದರು. ಇಂಜಿನಿಯರ್ ಪುಟ್ಟಸ್ವಾಮಿ, ದೀಪಕ್ ಇದ್ದರು.  
ಹಾಸನ

ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರಕ್ಕೆ ಕ್ರಮವಹಿಸಿ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯಲ್ಲಿ ರೇಜಿಂಗ್ ಮೇನ್ ಪೈಪ್‌ಲೈನ್ ಅಳವಡಿಕೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕ ಎ.ಮಂಜು ಸೂಚಿಸಿದರು.
ತಾಲೂಕಿನ ಗಡಿಭಾಗ ಕೊಡಗು ಜಿಲ್ಲೆಯ ಕಟ್ಟೇಪುರ ಹೇಮಾವತಿ ಹಿನ್ನೀರಿನಲ್ಲಿ ನಡೆಯುತ್ತಿರುವ ನೂತನ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಜಾಕ್‌ವೆಲ್ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ರೇಸಿಂಗ್ ಮೇನ್ ಪೈಪ್ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಳೆ ಕಳೆದುಕೊಳ್ಳುವ ರೈತರಿಗೆ ಪರಿಹಾರಕ್ಕೆ ಕ್ರಮ ವಹಿಸುವಂತೆ ತಹಸೀಲ್ದಾರ್ ಕೃಷ್ಣಮೂರ್ತಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸ್ಥಳದಲ್ಲಿ ಹಾಜರಿದ್ದ ಗ್ರಾಮಲೆಕ್ಕಾಧಿಕಾರಿ ದಿವ್ಯಾ ಅವರಿಗೆ ಸೂಚನೆ ನೀಡಿದರು.
ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿ 8 ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ. ಈ ನಿರ್ಲಕ್ಷೃವನ್ನು ಸಹಿಸುವುದಿಲ್ಲ. ಏತನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಕೆರೆ ಕಟ್ಟಿಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡಿಲ್ಲ.ಇದಕ್ಕೆ ಇಂಜಿನಿಯರ್‌ಗಳೇ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಯೋಜನೆಯು 190 ಕೋಟಿ ರೂ. ವೆಚ್ಚದಲ್ಲಿ 200 ಕೆರೆಗಳಿಗೆ ನೀರು ತುಂಬಿಸುವುದಾಗಿದೆ. ಸುಮಾರು 78.10 ಕಿ.ಮೀ. ದೂರ ರೇಸಿಂಗ್ ಮೇನ್ ಪೈಪ್‌ಲೈನ್ ಕಾಮಗಾರಿ ಆಗಬೇಕಿದ್ದು, ಈಗಾಗಲೇ 70 ಕಿ.ಮೀ. ಕೆಲಸ ಪೂರ್ಣಗೊಂಡಿದೆ. ಬಾಕಿ 8 ಕಿ.ಮೀ. ಕಾಮಗಾರಿ ಇದ್ದು, ಕೂಡಲೇ ಪೂರ್ಣಗೊಳಿಸಬೇಕು ಎಂದು ಹಾರಂಗಿ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೀಪಕ್ ಅವರಿಗೆ ತಾಕೀತು ಮಾಡಿದರು.
ರೈತರು, ಅಧಿಕಾರಿಗಳೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಿದ್ದು, ಭೂಸ್ವಾಧೀನ ಪಡೆದ ರೈತರಿಗೆ ಪರಿಹಾರ ನೀಡಲು ಅಗತ್ಯವಾದ 9 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿ ರೈತರ ದಾಖಲೆಗಳನ್ನು ಸಿದ್ಧಪಡಿಸಿ ಕೊಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ರೈತರಿಗೆ ಹಣ ದೊರೆಯಲಿದ್ದು, ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದರು.