ಹಾಸನದ ಪೆನ್‌ಷನ್ ಮೊಹಲ್ಲಾದಲ್ಲಿರುವ ಸಾಹಿತಿ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿ ಎಸ್‌ಐಆರ್‌ಗೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ತಹಸೀಲ್ದಾರ್ ಗೀತಾ ಇತರರಿದ್ದರು.  
ಹಾಸನ

ಎಸ್‌ಐಆರ್ ಯಶಸ್ವಿಗೆ ಬಿಎಲ್‌ಗಳಿಗೆ ಸಹಕಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಯಶಸ್ವಿಗೆ ಬಿಎಲ್‌ಗಳಿಗೆ ಸಹಕಾರ ನೀಡಿ
  • ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಮನವಿ
ಹಾಸನ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಜು.29 ರವರೆಗೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ತಿಳಿಸಿದರು.
ನಗರದ ಪೆನ್‌ಷನ್ ಮೊಹಲ್ಲಾದಲ್ಲಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಸಮಗ್ರ ಪರಿಷ್ಕರಣೆಯ ಎನುಮರೇಷನ್ ನಮೂನೆಯನ್ನು ಭರ್ತಿ ಮಾಡಿಸುವ ಮೂಲಕ ಪರಿಷ್ಕರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮನೆಯ ಸದಸ್ಯರು ಮತಗಟ್ಟೆ ಅಧಿಕಾರಿಗಳು ನೀಡುವ ದ್ವಿಪ್ರತಿಯ ಎನುಮರೇಷನ್ ನಮೂನೆಯನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಹಿ ಮಾಡಿ ಒಂದು ಪ್ರತಿಯನ್ನು ತಮ್ಮ ಬಳಿ ಇರಿಸಿಕೊಂಡು ಮತ್ತೊಂದು ಪ್ರತಿಯನ್ನು ಬಿಎಲ್‌ಒಗಳಿಗೆ ನೀಡುವ ಮೂಲಕ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ಅರ್ಜಿಯಲ್ಲಿ ಕೇಳಿರುವ ಸರಳ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಬೇಕು. ಮನೆಯಲ್ಲಿ ಒಬ್ಬರೇ ಸದಸ್ಯರು ಇದ್ದು, ಇನ್ನುಳಿದವರು ಸ್ಥಳದಲ್ಲಿ ಇಲ್ಲದೆ ಇದ್ದರೂ ಸಹ ಮನೆಯಲ್ಲಿರುವ ಸದಸ್ಯರೇ ಇತರ ಸದಸ್ಯರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬಹುದು. ಅಲ್ಲದೆ ಅರ್ಜಿದಾರರ ಸಂಬಂಧಿಕರ ಬಗ್ಗೆಯೂ ಮಾಹಿತಿ ನೀಡಿ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ಮಾಹಿತಿ ನೀಡಿದರು.
ಹಾಸನದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಈಗಾಗಲೇ ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಭಾನು ಮುಷ್ತಾಕ್ ಅವರ ಮನೆಗೆ ನಾನೇ ಖುದ್ದು ಆಗಮಿಸಿದ್ದು, ಅವರ ಕೈಯಿಂದಲೇ ಎನುಮರೇಷನ್ ನಮೂನೆ ಭರ್ತಿ ಮಾಡಿಸುವ ಮೂಲಕ ವಿಶೇಷ ಸಮಗ್ರ ಪರಿಷ್ಕರಣೆ ಆರಂಭಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ತಹಸೀಲ್ದಾರ್ ಗೀತಾ ಇತರರಿದ್ದರು.