ಹೊಳೆನರಸೀಪುರ ಪಟ್ಟಣದ ಸೋಶಿಯಲ್ ಕ್ಲಬ್‌ನಲ್ಲಿ ಭಾರತ್ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
- ಸೋಷಿಯಲ್ ಕ್ಲಬ್ ಕಾರ್ಯದರ್ಶಿ ಕೆ.ಆರ್.ಸುದರ್ಶನ ಕುಮಾರ್ ಅಭಿಪ್ರಾಯ
ಹೊಳೆನರಸೀಪುರ : ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ದೇಶಪ್ರೇಮ, ಪರಿಸರ ಸಂರಕ್ಷಣೆ ಮತ್ತು ನಮ್ಮ ಸಾಂಪ್ರದಾಯಿಕ ಕಲೆ ಮತ್ತು ಪರಂಪರೆಯನ್ನು ಉಳಿಸಿ ಬೆಳಸುವ ಕಾರ್ಯಾಗಾರಗಳಾಗಬೇಕು ಎಂದು ಸೋಷಿಯಲ್ ಕ್ಲಬ್ ಕಾರ್ಯದರ್ಶಿ ಕೆ.ಆರ್.ಸುದರ್ಶನ ಕುಮಾರ್ ತಿಳಿಸಿದರು.
ಪಟ್ಟಣದ ಸೋಷಿಯಲ್ ಕ್ಲಬ್‌ನಲ್ಲಿ ಭಾರತ್ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇಸಿಗೆ ಶಿಬಿರಗಳು ಮಕ್ಕಳಿಗೆ ರಜೆಯ ಅವಧಿಯಲ್ಲಿ ಹೊಸ ಕೌಶಲಗಳನ್ನು ಕಲಿಯಲು, ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅವರಲ್ಲಿ ಸ್ವಾವಲಂಬನೆ ಮೂಡಿಸುತ್ತದೆ. ನಮ್ಮ ದೇಶೀಯ ಕ್ರೀಡೆಗಳು, ಕಲಾ ಪ್ರಕಾರಗಳು, ಯೋಗ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಹಾಡು, ಚಿತ್ರಕಲೆ ಇನ್ನಿತರ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದರು.
ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ್ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಕಾರ್ಯದರ್ಶಿ ಆರ್.ಕುಮುದಾ, ಕಳೆದ ಆರು ದಿನಗಳಲ್ಲಿ 150 ಕ್ಕೂ ಹೆಚ್ಚಿನ ಮಕ್ಕಳು ಉಚಿತ ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಬಗ್ಗೆ ಮಾಹಿತಿ, ಶ್ಲೋಕ ಪಠಣ, ನೀತಿ ಕಥೆಗಳು, ಒಳಾಂಗಣ ಮತ್ತು ಹೊರಾಂಗಣ ಸಾಂಪ್ರದಾಯಿಕ ಆಟಗಳು, ನೃತ್ಯ, ಸಂಗೀತ, ಚಿತ್ರ ಕಲೆ, ವ್ಯಕ್ತಿತ್ವ ವಿಕಸನ, ಪಿ.ಪಿ.ಟಿ ಪ್ರೆಸೆಂಟೇಷನ್, ವೇದಿಕ್ ಗಣಿತ, ಅಗ್ನಿಶಾಮಕ ಇಲಾಖೆಯು ವತಿಯಿಂದ ಅಗ್ನಿ ಅವಘಡ ಕುರಿತ ಪ್ರಾತ್ಯಕ್ಷಿಕೆ, ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೇಸಿಗೆ ಯಶಸ್ವಿಯಾಗಲು ಭಾಗವಹಿಸಿದ ಮಕ್ಕಳಿಗೆ, ಅವರ ಪಾಲಕರಿಗೆ ಮತ್ತು ಶಿಬಿರದಲ್ಲಿ ಮಕ್ಕಳಿಗೆ ವಿಶೇಷ ಉಪನ್ಯಾಸ, ಕಾರ್ಯಾಗಾರ ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ತಾಲೂಕು ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಅಧ್ಯಕ್ಷ ಮುರಳೀಧರ ಗುಪ್ತ, ನಿಕಟ ಪೂರ್ವ ಅಧ್ಯಕ್ಷ ಶಂಕರ ನಾರಾಯಣ ಐತಾಳ್, ಮಾಜಿ ಸೈನಿಕ ಈಶ್ವರ್, ದಿವಾಕರ್, ಎಂ.ಆರ್.ಎಸ್.ನಾಗೇಶ್, ರಾಮದಾಸ್, ನಾಗೇಂದ್ರ, ಲಕ್ಷ್ಮೀ, ಬ್ರಿಟಾನಿಯಾ ಕಂಪನಿಯ ಮಾರಾಟ ವಿಭಾಗದ ವ್ಯವಸ್ಥಾಪಕ ವಿಕಾಸ್ ಮತ್ತು ಮೇಘನಾ, ವಾಸವಿ ಬ್ಯಾಂಕ್ ರಂಗನಾಥ್ ಶೆಟ್ಟಿ, ವಿಜಯ ಕುಮಾರಿ, ರಂಗಮ್ಮ, ರತ್ನ ವಿಲಾಸ ಬೇಕರಿ ವೆಂಕಟೇಶ್ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು.