ತಾಲೂಕಿನ ಬಿಕ್ಕೋಡು ಸಮೀಪದ ಆನೆ ಕ್ಯಾಂಪಿನಲ್ಲಿ ಸಾಕಾನೆ ಸುಗ್ರೀವನಿಂದ ಗಾಯಗೊಂಡ ಕಾವಾಡಿಗ ರಾಜುಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಬೇಲೂರು: ಕಾಡಾನೆ ಸೆರೆ ಹಿಡಿಯಲು ದುಬಾರೆ ಕ್ಯಾಂಪ್‌ನಿಂದ ಬಿಕ್ಕೋಡು ಗ್ರಾಮದ ಕ್ಯಾಂಪಿಗೆ ಆಗಮಿಸಿದ್ದ ಸುಗ್ರೀವ ಆನೆ ಆರೈಕೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾವಾಡಿಗ ರಾಜು (42) ಮೇಲೆ ದಾಳಿ ನಡೆಸಿ, ದಂತದಿಂದ ತಿವಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ತಕ್ಷಣ ರಾಜುಗೆ ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯನ್ನು ಬಲಿ ಪಡೆದಿದ್ದ ಕಾಡಾನೆ ಸೆರೆಗಾಗಿ ಮಂಗಳವಾರ ರಾತ್ರಿ ಬಿಕ್ಕೋಡು ಸಮೀಪದ ಆನೆ ಕ್ಯಾಂಪ್‌ಗೆ ಸುಗ್ರೀವ, ಅಯ್ಯಪ್ಪ, ಶ್ರೀರಾಮ, ಲಕ್ಷ್ಮಣ, ಧನಂಜಯ, ಹರ್ಷ ಕುಮ್ಕಿ ಸಾಕಾನೆಗಳು ಬಂದಿಳಿದಿದ್ದವು. ಬುಧವಾರ ಬೆಳಿಗ್ಗೆಯಿಂದಲೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿತ್ತು. ಅರೇಹಳ್ಳಿ ಹೋಬಳಿಯ ಕಿತ್ತಾವರ-ಕೆರಗೋಡು ಸಮೀಪದ ಕಾಫಿ ತೋಟದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಡಾನೆ ಸೆರೆಸಿಕ್ಕರೂ, ನಂತರ ತಪ್ಪಿಸಿಕೊಂಡು ಕಾಡಿನತ್ತ ಓಡಿತ್ತು. ಇದರಿಂದ ಬುಧವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ ಅಧಿಕಾರಿಗಳು, ರಾತ್ರಿ ವೇಳೆಗೆ ಆನೆಗಳನ್ನು ವಾಪಸ್ ಬಿಕ್ಕೋಡು ಕ್ಯಾಂಪ್‌ಗೆ ಕರೆತಂದಿದ್ದರು.
ನಿಗದಿಯಂತೆ ಗುರುವಾರ ಬೆಳಿಗ್ಗೆಯಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿಯಬೇಕಿತ್ತು. ಇದಕ್ಕಾಗಿ ಕಾವಾಡಿಗರು, ಮಾವುತರು ತಯಾರಿ ಮಾಡಿಕೊಂಡು, ಆನೆಗಳ ಆರೈಕೆ ಮಾಡುತ್ತಿದ್ದರು. ಈ ವೇಳೆ ಸುಗ್ರೀವ ಆನೆ ಏಕಾಏಕಿ ಆಕ್ರೋಶಗೊಂಡು ಕಾವಾಡಿಗ ರಾಜು ಮೇಲೆ ದಾಳಿ ನಡೆಸಿದೆ. ಅಲ್ಲದೇ ದಂತದಿಂದ ಹೊಟ್ಟೆಗೆ ಜೋರಾಗಿ ತಿವಿದಿದೆ. ಇದರಿಂದ ರಾಜು ನೆಲಕ್ಕುರುಳಿದ್ದು, ತಕ್ಷಣವೇ ಇತರ ಕಾವಾಡಿಗರು, ಮಾವುತರು ಹಾಗೂ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಯತೀಶ್ ಮತ್ತು ಸಿಬ್ಬಂದಿ ರಾಜುನನ್ನು ದೂರಕ್ಕೆ ಎಳೆದುಕೊಂಡು ಆನೆಯಿಂದ ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ರಾಜುನನ್ನು ಬೇಲೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿಸಲಾಗಿದೆ. ನಂತರ ಹಾಸನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ಇತ್ತ ಸುಗ್ರೀವ ಆನೆಯನ್ನು ಬಿಕ್ಕೋಡು ಕ್ಯಾಂಪ್‌ನಿಂದ ಮರಳಿ ದುಬಾರೆ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾಎರ. ಡಿಎಫ್‌ಒ ಸೌರಬ್ ಕುಮಾರ್, ಮಡಿಕೇರಿ ಎಸಿಎಫ್ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಯತೀಶ್ ಸೇರಿದಂತೆ ಇತರರು ಆಸ್ಪತ್ರೆಗೆ ಭೇಟಿ ನೀಡಿ ಕಾವಾಡಿಗನ ಆರೋಗ್ಯ ವಿಚಾರಿಸಿದ್ದಾರೆ.
ದುಬಾರೆ ಕ್ಯಾಂಪ್‌ಗೆ ಮರಳಿದ ಸುಗ್ರೀವ
ಕಾವಾಡಿಗನ ಮೇಲೆ ದಾಳಿ ಮಾಡಿದ ಸುಗ್ರೀವ ಆನೆಯನ್ನು ವಾಪಸ್ ದುಬಾರೆ ಅರಣ್ಯದ ಆನೆ ಕ್ಯಾಂಪಿಗೆ ಲಾರಿ ಮೂಲಕ ಕರೆದೊಯ್ಯಲಾಗಿದೆ. ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿಸಲು ಬಿಕ್ಕೋಡು ಕ್ಯಾಂಪಿಗೆ ಭೀಮಾ ಮತ್ತು ಮಹೇಂದ್ರ ಆನೆಯನ್ನು ಕರೆ ತರುವ ಸಾಧ್ಯತೆ ಇದ್ದು, ಶುಕ್ರವಾರದಿಂದ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.