ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಮಠದಲ್ಲಿ ಸುಬ್ರಹ್ಮಣ್ಯೇಶ್ವರ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
- ಧರ್ಮ ಧ್ವಜಾರೋಹಣ ನೆರವೇರಿಸಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ
ಚನ್ನರಾಯಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕುಂದೂರು ಮಠದಲ್ಲಿ ಸುಬ್ರಹ್ಮಣ್ಯೆಶ್ವರಸ್ವಾಮಿ ಹಾಗೂ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಂಗಳವಾರ ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀಗಳು ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿ ಗೋವು ಪೂಜೆ ನೆರವೇರಿಸಿದ ಬಳಿಕ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ರಂಗನಾಥಸ್ವಾಮಿ, ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ದೇಗುಲದ ಮುಂಭಾಗ ಧರ್ಮ ಧ್ವಜಾರೋಹಣ ನೆರವೇರಿಸಿ ರಥಕ್ಕೆ ನವಕಲಶಾರೋಹಣ ಮಾಡಿದರು.
ಕ್ಷೇತ್ರದ ಪ್ರಧಾನ ದೇವತೆ ಮೆಳೆಯಮ್ಮ, ರಂಗನಾಥಸ್ವಾಮಿ, ಸತ್ಯನಾರಾಯಣ ಸ್ವಾಮಿ, ಲಕ್ಷ್ಮೀದೇವಿ ವಿಶ್ವನಾಥ, ಪಾರ್ವತಿ ಅಮ್ಮನವರು, ಸುಬ್ರಹ್ಮಣ್ಯೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳು, ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರ ಸ್ಮರಣೆಯೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಯಿತು.
ಕ್ಷೇತ್ರ ದೇವತೆ ಆದಿಶಕ್ತಿ ಮೆಳೆಯಮ್ಮ ದೇವಿಗೆ ಶ್ರೀಗಳು ಪೂಜೆ ಸಲ್ಲಿಸಿ ದೇವಿಯ ಸನ್ನಿಧಾನದಲ್ಲಿ ಶ್ರೀ ಗಣಪತಿ ಹೋಮ, ವಾಸ್ತು ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ ಮಹಾಮಂಗಳಾರತಿ ನೆರವೇರಿಸಿದರು. ಶ್ರೀಗಳ ಸಾನ್ನಿಧ್ಯದಲ್ಲಿ ಸುಮಂಗಲಿಯರು ಲಲಿತಾ ಸಹಸ್ರನಾಮ, ಲಲಿತಾ ತ್ರಿಶತಿ, ಪಠಿಸಿ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಿದರು.
ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಮಠದ ಕಾರ್ಯದರ್ಶಿ ಶ್ರೀ ಶಂಭುನಾಥಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಬೆಂಗಳೂರಿನ ಹುಳಿಮಾವು ಶಾಖಾ ಮಠದ ಶ್ರೀ ಶೈಲನಾಥ ಸ್ವಾಮೀಜಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.