ಹಳೇಬೀಡಿನ ಆರಕ್ಷಕ ಠಾಣೆಯ ಪಿಸ್‌ಐ ಮಂಜುನಾಥ್ 
ಹಾಸನ

ಲಂಚ ಪಡೆಯುತ್ತಿದ್ದ ಸಬ್ ಇನ್‌ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಎನ್‌ಸಿಆರ್ ಇತ್ಯರ್ಥ ಪಡಿಸಲು ಬೇಡಿಕೆ

ಹಳೇಬೀಡು:

ಎನ್‌ಸಿಆರ್ ಇತ್ಯರ್ಥ ಪಡಿಸಲು ವ್ಯಕ್ತಿಯೊಬ್ಬರಿಂದ ಇಪ್ಪತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದ ಹಳೇಬೀಡು ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಗುರುವಾರ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಘಟ್ಟದಹಳ್ಳಿ ಗ್ರಾಮದ ಸಂತೋಷ್ ಎಂಬವರು ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಎನ್‌ಸಿಆರ್ ಇತ್ಯರ್ಥ ಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ, ದೂರುದಾರರಿಂದ ಇಪ್ಪತ್ತು ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದಾಗ ಮಂಜುನಾಥ್ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದರು.

ಘಟ್ಟದಹಳ್ಳಿ ಗ್ರಾಪಂ ವ್ಯಾಪ್ತಿಯ ಹುಲ್ಲೇಕಲ್ಲಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನವೀನ್ ಹಾಗೂ ಸಂತೋಷ್ ಎಂಬವರ ವಿರುದ್ಧ ಕೆಲ ಗ್ರಾಮಸ್ಥರು ಮೌಖಿಕ ದೂರು ನೀಡಿದ್ದನ್ನು ಪರಿಶೀಲಿಸಲು ಬುಧವಾರ ಸ್ಥಳಕ್ಕೆ ಹೋಗಿದ್ದ ಪಿಎಸ್‌ಐ ಮಂಜುನಾಥ್, ಅಕ್ರಮ ಕಂಡು ಬಂದಲ್ಲಿ ಇಬ್ಬರ ವಿರುದ್ದವೂ ಕೇಸ್ ದಾಖಲಿಸುವುದಾಗಿ ಹೇಳಿದ್ದರು. ಮಾತು ವಾಗ್ವಾದಕ್ಕೆ ತಿರುಗಿ ಅವಾಚ್ಯ ಶಬ್ದಗಳಿಂದ ತನ್ನನ್ನು ನಿಂದಿಸಿದ್ದಾರೆ ಎಂದು ಸ್ವತಃ ಪಿಎಸ್‌ಐ , ನವೀನ್ ಹಾಗೂ ಸಂತೋಷ್ ವಿರುದ್ದ ಎನ್‌ಸಿಆರ್ ದಾಖಲಿಸಿದ್ದರು. ಕೋರ್ಟ್ ಮೂಲಕ ಎಫ್‌ಐಆರ್ ದಾಖಲಿಸಿವುದಾಗಿಯೂ ಹೇಳಿದ್ದರು. ಗುರುವಾರ ಬೆಳಗ್ಗೆ ಈ ಸಂಬಂಧ ರಾಜಿಗೆಂದು ಬಂದಿದ್ದ ಸಂತೋಷ್ ಬಳಿ 1 ಲಕ್ಷ ರೂ. ಲಂಚಕ್ಕೆ ಮಂಜುನಾಥ್ ಬೇಡಿಕೆ ಇಟ್ಟಿದ್ದರು. ಬಳಿಕ ಇಪ್ಪತ್ತು ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಲಂಚದ ಹಣ ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳಾದ ಶಿಲ್ಪಾ ಮತ್ತು ಗವಿರಾಜ್, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಹೆಚ್ಚಿನ ತನಿಖೆ ಮುಂದುವರಿದಿದೆ. ಪೊಲೀಸ್ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹಳೇಬೀಡು ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ.