ಆಲೂರು ತಾಲೂಕು ಆಡಳಿತ ಸೌಧದಲ್ಲಿ ನೂತನ ಉಪ ವಿಭಾಗಾಧಿಕಾರಿ ನ್ಯಾಯಾಲಯವನ್ನು ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಉದ್ಘಾಟಿಸಿದರು. ತಹಸೀಲ್ದಾರ್ ಎಚ್. ಮಲ್ಲಿಕಾರ್ಜುನ, ಸುಪ್ರಿತಾ, ಎಂ.ಎಸ್.ಮಹೇಶ್ ಇತರರು ಇದ್ದರು.
ಜನಸಾಮಾನ್ಯರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು ಎಂಬ ಮೂಲ ಉದ್ದೇಶದಿಂದ ಆಲೂರಿನಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನೂತನ ಉಪ ವಿಭಾಗಾಧಿಕಾರಿ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದರು.
ಹಾಸನ ಮತ್ತು ಕೊಡಗು ಜಿಲ್ಲೆಗಳ ಗಡಿವರೆಗೂ ಆಲೂರು ತಾಲೂಕಿನ ವ್ಯಾಪ್ತಿ ಇದೆ. ನ್ಯಾಯ ಅರಸಿ ಬರುವ ಕಕ್ಷಿದಾರರು ಆಲೂರು ತಾಲೂಕಿನಿಂದ ಸಕಲೇಶಪುರಕ್ಕೆ ಬಂದು ಹೋಗಲು ಅತಿಯಾದ ಸಮಯ ವ್ಯರ್ಥವಾಗುತ್ತಿತ್ತು. ಕಕ್ಷಿದಾರರ ಸಂಕಷ್ಟ ಅರಿವಿಗೆ ಬಂದಿದ್ದು, ತ್ವರಿತವಾಗಿ ನ್ಯಾಯ ಒದಗಿಸಬೇಕು ಎಂಬ ಮೂಲ ಉದ್ದೇಶದಿಂದ ಪ್ರತಿ ಮಂಗಳವಾರ ಆಲೂರು ತಾಲೂಕು ಆಡಳಿತ ಸೌಧದಲ್ಲಿ ನ್ಯಾಯಾಲಯ ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ಈಗಾಗಲೇ ಬೇಲೂರು, ಅರಕಲಗೂಡು ತಾಲೂಕಿನಲ್ಲಿ ನ್ಯಾಯಾಲಯ ನಡೆಸಲಾಗುತ್ತಿದೆ. ಅದರಂತೆ ಆಲೂರಿನಲ್ಲಿ ಪ್ರಾರಂಭ ಮಾಡಿರುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದೆ ಎಂದರು.
ತಹಸೀಲ್ದಾರ್ ಎಚ್.ಮಲ್ಲಿಕಾರ್ಜುನ ಮಾತನಾಡಿ, ಮೇಲಧಿಕಾರಿಗಳು ವಾರಕ್ಕೊಮ್ಮೆ ತಾಲೂಕು ಕಚೇರಿಗೆ ಬಂದು ಹೋಗುವುದರಿಂದ, ಕಚೇರಿ ಸಿಬ್ಬಂದಿ ಸಹ ಸಾರ್ವಜನಿಕರ ಕೆಲಸಗಳನ್ನು ಪೂರೈಸಲು ಹೆಚ್ಚು ಒತ್ತು ನೀಡುತ್ತಾರೆ ಎಂಬ ಆತ್ಮವಿಶ್ವಾಸವಿದೆ ಎಂದರು.
ಸಕಲೇಶಪುರ ತಹಸೀಲ್ದಾರ್ ಸುಪ್ರಿತಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್, ವಕೀಲರ ಸಂಘದ ಕಾರ್ಯದರ್ಶಿ ಆರ್.ಬಿ.ಸುರೇಶ್, ತಾಲೂಕು ವಕೀಲರ ಸಂಘದ ಸದಸ್ಯರು ಇದ್ದರು.