ಪರೀಕ್ಷಾ ಕೇಂದ್ರದ ಅಧಿಕಾರಿಗಳ ಮತ್ತು ಮೇಲ್ವಿಚಾರಕರ ಎಡವಟ್ಟಿನಿಂದಾಗಿ ಎರಡೆರಡು ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆದು ಆತಂಕದಲ್ಲಿರುವ ವಿದ್ಯಾರ್ಥಿನಿಯರು.
ಬೇಲೂರು: ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಎಡವಟ್ಟಿನಿಂದಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ಕೆಲ ವಿದ್ಯಾರ್ಥಿಗಳು ಎರಡೆರಡು ಬಾರಿ ಉತ್ತರ ಬರೆದ ಘಟನೆ ಬೇಲೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ನಡೆದಿದೆ.
ಸೋಮವಾರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಾಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೀಸಲಾಗಿತ್ತು. ಪುನಾರಾವರ್ತಿತ ವಿದ್ಯಾರ್ಥಿಗಳೊಂದಿಗೆ ಹಾಲಿ ವಿದ್ಯಾರ್ಥಿಗಳೂ ಕುಳಿತಿದ್ದರು.
ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆಯೇ ಎಲ್ಲ ವಿದ್ಯಾರ್ಥಿಗಳಿಗೂ ಕೊಡುವಂತೆಯೇ ರೆಗ್ಯುಲರ್ ವಿದ್ಯಾರ್ಥಿಗಳಿಗೂ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗಿದೆ. ಇದರಲ್ಲಿ ಪಟ್ಟಣದ ಸರ್ವೋದಯ ಕಾಲೇಜಿನ 3 ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿನಿಯರು ಸಹ ಇದ್ದರು. ಅವರಿಗೆ ಹಳೆಯ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿನಿಯರು ಮೂರು ಗಂಟೆ ಪರೀಕ್ಷೆ ಬರೆದು ಹೊರಬಂದಿದ್ದಾರೆ. ಬಳಿಕ ಇತರ ವಿದ್ಯಾರ್ಥಿಗಳ ಕೈಲಿದ್ದ ಪ್ರಶ್ನೆ ಪತ್ರಿಕೆ ನೋಡಿ ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ನಾವು ತಪ್ಪಾದ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿದ್ದೇವೆ ಎನ್ನುವುದು ಅರಿವಿಗೆ ಬಂದು ಕೊಠಡಿ ಮೇಲ್ವಿಚಾರಕರನ್ನು ಪ್ರಶ್ನಿಸಿದ್ದಾರೆ.
ಇದರಿಂದ ಗಾಬರಿಗೊಂಡ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಆ ವಿದ್ಯಾರ್ಥಿನಿಯರನ್ನು ಮತ್ತೆ ಪರೀಕ್ಷಾ ಕೊಠಡಿಯೊಳಕ್ಕೆ ಕರೆದು ರೆಗ್ಯುಲರ್ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವಂತೆ ಹೇಳಿ ಕೇವಲ 45 ನಿಮಿಷಗಳ ಕಾಲಾವಕಾಶ ನೀಡಿದರು ಎನ್ನಲಾಗಿದೆ.
ಈ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಕಾಲೇಜಿನ ಉಪನ್ಯಾಸಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಉಪನ್ಯಾಸಕರು ಪರೀಕ್ಷಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು. ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಅಥವಾ ನ್ಯಾಯಸಮ್ಮತ ಪರಿಹಾರದ ಬಗ್ಗೆ ಸರ್ಕಾರ, ಶಿಕ್ಷಣ ಮಂಡಳಿ ಚಿಂತಿಸಬೇಕೆಂದು ಆಗ್ರಹಿಸಿದರು.
ಸರ್ವೋದಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಲ್ಲೇಶಗೌಡ ಮಾತನಾಡಿ, ಪರೀಕ್ಷೆಗೆ ಮೊದಲು ಪ್ರತಿ ಕಾಲೇಜಿನಿಂದ ಎಷ್ಟು ವಿದ್ಯಾರ್ಥಿಗಳು ಹಳೆಯ ಪಠ್ಯಕ್ರಮ, ಹೊಸ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಲಾಗುತ್ತದೆ. ಆದರೆ, ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಕೊಡುವ ವೇಳೆ ಮೇಲ್ವಿಚಾರಕರು ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳೇ ಎಂದು ಊಹಿಸಿ ಹೊಸ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಹಳೆಯ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಆದರೆ, ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಕಷ್ಟವಾಗಿದೆ ಎಂದು ಪರೀಕ್ಷೆ ಬರೆದಿದ್ದಾರೆ. ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿ ಸುಹಾನಾ ಮಾತನಾಡಿ, ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರ ತಪ್ಪಿನಿಂದ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ. ಇದಕ್ಕೆ ಪರೀಕ್ಷಾ ಸಿಬ್ಬಂದಿ ಪ್ರಾರಂಭದಲ್ಲಿ ಏನೂ ಆಗಲ್ಲ ಬಿಡಿ, ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ. ನಂತರ 6 ವಿದ್ಯಾರ್ಥಿಗಳನ್ನು ಮತ್ತೆ ಕೊಠಡಿಯೊಳಕ್ಕೆ ಕರೆದು ಬೇರೆ ಪ್ರಶ್ನೆಪತ್ರಿಕೆ ನೀಡಿ ಬರೆಯಲು ಹೇಳಿ ಕೇವಲ 45 ನಿಮಿಷ ಸಮಯ ನೀಡಿದ್ದಾರೆ. ಈ ಬಗ್ಗೆ ಮಾತನಾಡಲು ಹೋದಾಗಲೂ ನಮ್ಮೊಂದಿಗೂ ಸಮರ್ಪಕವಾಗಿ ಮಾತನಾಡಲಿಲ್ಲ ಎಂದು ಆರೋಪಿಸಿದರು.
ಬೇಲೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ನಡೆದಿರುವ ಘಟನೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಗಣಪತಿ, ಉಪ ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಸನ