ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಹಾಸನ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಾಲಿಬಾಲ್ ಕ್ರೀಡಾಕೂಟಕ್ಕೆ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಚಾಲನೆ ನೀಡಿದರು. ಡಾ.ಮಹೇಶ್, ಹೆಬ್ಬಾಳು ಹಾಲಪ್ಪ, ಪ್ರಕಾಶ್ ಕುಮಾರ್, ಬಾಬು ಪ್ರಸಾದ್ ಇದ್ದರು. 
ಹಾಸನ

ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ

ಬೇಲೂರು: ವಿದ್ಯಾರ್ಥಿಗಳು ಓದಿನ ಜತೆ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸಿದರೆ ದೈಹಿಕ, ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಂಕ ಗಳಿಕೆಗಷ್ಟೇ ಸೀಮಿತವಾಗದೆ ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಹೇಳಿದರು.
ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಹಾಸನ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷರ ವಿಭಾಗದ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸದ ಸಂದರ್ಭ ಕ್ರೀಡೆ ವಿದ್ಯಾರ್ಥಿಗಳಿಗೆ ಮುಖ್ಯವಾಗಿದೆ. ಓದಿನ ಜತೆಗೆ ದೈಹಿಕ ಸದೃಢತೆಗೆ ಕ್ರೀಡೆ ಪ್ರಯೋಜನವಾಗುತ್ತದೆ. ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವತ್ತ ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕೋಟಾದಲ್ಲಿ ಸರ್ಕಾರಿ ನೌಕರಿ ಹಾಗೂ ವಿವಿಧ ವೃತ್ತಿಗಳಲ್ಲಿ ಅವಕಾಶ ಪಡೆಯಬಹುದಾಗಿದೆ ಎಂದರು.
ವೈಡಿಡಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ ಮಾತನಾಡಿ, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿಂದೆ ಹಾಸನ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವೈಡಿಡಿ ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ. ಕ್ರೀಡೆಯ ಜತೆಗೆ ವಿದ್ಯಾಭ್ಯಾಸದಲ್ಲೂ ಮುಂದಾಗಿ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಆದರೂ, ಕೆಲವರು ಕಾಲೇಜಿನ ಬಗ್ಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸಕ್ಕೆ ಮುಂದಾಗುವುದು ಬೇಸರದ ಸಂಗತಿ. ಇತ್ತೀಚೆಗೆ ಬಂದಿರುವ ಕಾಲೇಜು ಅಭಿವೃದ್ಧಿ ಸಮಿತಿಯವರ ಪ್ರೋತ್ಸಾಹ ಸ್ವಾಗತಾರ್ಹ. ಎಲ್ಲರ ಸಹಕಾರದೊಂದಿಗೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಲು ಸಾಧ್ಯವಾಗಿದೆ ಎಂದರು.
ಹಾಸನ ವಿಶ್ವವಿದ್ಯಾಲಯ ಸಂಯೋಜಕ ಪ್ರಕಾಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಸಂಘಟನಾ ಕಾರ್ಯದರ್ಶಿ ಬಾಬು ಪ್ರಸಾದ್, ಹಾಸನ ದೈಹಿಕ ಶಿಕ್ಷಣ ವಿಭಾಗ ಸಹ ನಿರ್ದೇಶಕ ಚಂದ್ರನಾಯಕ್, ಪುರಸಭೆ ಸದಸ್ಯ ಪ್ರಭಾಕರ್, ಜಾನಪದ ಪರಿಷತ್ತು ಅಧ್ಯಕ್ಷ ಸಿದ್ದೇಗೌಡ, ಪತ್ರಕರ್ತರ ಸಂಘದ ಉಪಾಧ್ಯಕ್ಷ ವೆಂಕಟೇಶ್, ಉಪನ್ಯಾಸಕರು ಇದ್ದರು.