ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ಪೋಕ್ಸೋ ಕಾಯ್ದೆ ಹಾಗೂ ಮಾನಸಿಕ ಆರೋಗ್ಯ ಜಾಗೃತಿ, ಕನ್ನಡದ ಮಹತ್ವದ ಬೆಳವಣಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರುಣ್.ಎಂ.ತಾರಾನಾಥ್, ಶಿವನಗೌಡ.ಜಿ.ಪಾಟೀಲ್, ಜಿ.ಶಾಂತಕುಮಾರ್, ಬಿ.ಗಿರೀಶ್ ಇತರರು ಇದ್ದರು.  
ಹಾಸನ

ವಿದ್ಯಾರ್ಥಿಗಳೇ ಸಮಾಜದ ಬದಲಾವಣೆಯ ಶಕ್ತಿಗಳು

ಪ್ರಮುಖ ಮುಖ್ಯಾಂಶಗಳು

  • ವರುಣ್.ಎಂ.ತಾರಾನಾಥ್ ಅಭಿಪ್ರಾಯ
  • ಅರಿವು ಕಾರ್ಯಕ್ರಮ
ಬೇಲೂರು: ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಹಾಗೂ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಕನ್ನಡದ ಮಹತ್ವದ ಬೆಳವಣಿಗೆ ಬಗ್ಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ವರುಣ್.ಎಂ.ತಾರಾನಾಥ್ ನೇತೃತ್ವದಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ವರುಣ್.ಎಂ.ತಾರಾನಾಥ್ ಮಾತನಾಡಿ, ಮಕ್ಕಳು ಯಾವುದೇ ರೀತಿಯ ಶೋಷಣೆಗೆ ಒಳಗಾಗಿದ್ದರೂ ಅವರ ಪರ ನಿಂತು ಆತ್ಮಸ್ಥೈರ್ಯ ತುಂಬಬೇಕು. ಮಕ್ಕಳು ತಮ್ಮ ಸ್ನೇಹಿತರು, ಶಿಕ್ಷಕರು, ಪಾಲಕರು ಮತ್ತು ಸಮಾಜದ ಹಿರಿಯರ ಮೇಲೆ ನಂಬಿಕೆ ಇಟ್ಟು ತಮ್ಮ ಸಮಸ್ಯೆಗಳನ್ನು ಹೇಳಬಹುದಾದ ವಾತಾವರಣ ನಿರ್ಮಿಸಬೇಕು. ಇದಕ್ಕೆ ಕಾನೂನು ಒಂದೆ ಸಾಕಾಗುವುದಿಲ್ಲ. ಪ್ರಮುಖವಾಗಿ ಮಕ್ಕಳ ಮನಸ್ಸು ತುಂಬ ಸೂಕ್ಷ್ಮವಿದ್ದು ವಿದ್ಯಾಭ್ಯಾಸ, ಕುಟುಂಬದ ಸಮಸ್ಯೆ, ಸಾಮಾಜಿಕ ಒತ್ತಡಗಳು ಮಕ್ಕಳ ಮನಸ್ಸಿನ ಮೇಲಿನ ಪ್ರಭಾವ ಬೀರುತ್ತವೆ. ಅವರ ಮಾತುಗಳನ್ನು ಕೇಳಲು, ಭರವಸೆ ನೀಡಲು ಸಿದ್ಧರಿರಬೇಕು. ಮಾನಸಿಕವಾಗಿ ಬಲಿಷ್ಠವಾದ ಮಕ್ಕಳೇ ನಾಳಿನ ಸಮಾಜ ನಿರ್ಮಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಮಾಜದ ಬದಲಾವಣೆಯ ಶಕ್ತಿಗಳು. ನೀವು ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿ ಅರಿತು ಇತರರಿಗೂ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ನಮ್ಮ ಕನ್ನಡ ನಮ್ಮ ಹೆಮ್ಮೆ. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಿ, ಶಾಲಾ- ಕಾಲೇಜು ಹಾಗೂ ಆಡಳಿತದಲ್ಲಿ ಮತ್ತು ದಿನನಿತ್ಯದ ಬದುಕಿನಲ್ಲಿ ಕನ್ನಡದ ಬಳಕೆ ಹೆಚ್ಚಿದಾಗ ಮಾತ್ರ ಕನ್ನಡದ ನಿಜವಾದ ಅಸ್ತಿತ್ವ ಉಳಿಯುತ್ತದೆ. ಕನ್ನಡ ಕಾಪಾಡುವುದೇ ನಮ್ಮ ಹಕ್ಕು ಮತ್ತು ಜವಾಬ್ದಾರಿ ಎಂಬುದನ್ನು ಮರೆಯಬಾರದು ಎಂದರು.
ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್ ಮಾತನಾಡಿ, ಬೇಲೂರು ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 35 ಪೋಕ್ಸೋ ಪ್ರಕರಣ ದಾಖಲಾಗಿದ್ದು, ಅಷ್ಟು ಆರೋಪಿಗಳು ಜೈಲಿಗೆ ಹೋಗಿದಾರೆ. ಪೋಕ್ಸೋ ಕಾಯ್ದೆ ಮಕ್ಕಳ ಬೆಳವಣಿಗೆಗಾಗಿ ಮತ್ತು ರಕ್ಷಣೆಗಾಗಿ ಅತ್ಯಂತ ಕಠಿಣ ಕಾಯ್ದೆಯಾಗಿದೆ. ಪೋಕ್ಸೋ ಕಾಯ್ದೆ ಕೇವಲ ಕಾನೂನು ಅಲ್ಲ. ಇದು ಮಕ್ಕಳ ಭವಿಷ್ಯ ರಕ್ಷಿಸುವ ಕವಚವಾಗಿದೆ. ನಮ್ಮ ಠಾಣಾ ಮಟ್ಟದಲ್ಲೂ ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯಕ್ಕೆ ಶೂನ್ಯ ಸಹನೆ ನೀತಿ ಅನುಸರಿಸಲಾಗುತ್ತಿದೆ. ಯಾರೇ ತಪ್ಪೆಸಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಕರವೇ(ನಾರಾಯಣಗೌಡ)ಬಣದ ತಾಲೂಕು ಗೌರವಾಧ್ಯಕ್ಷ ಮಾಳೆಗೆರೆ ತಾರಾನಾಥ್ ಮಾತನಾಡಿ, ಮಕ್ಕಳ ಸುರಕ್ಷತೆ ಮತ್ತು ಅವರ ಹಕ್ಕು ಮತ್ತು ಮಾನಸಿಕ ಆರೋಗ್ಯ ನಮ್ಮ ಸಮಾಜದ ಅತ್ಯಂತ ಪ್ರಮುಖ ಜವಾಬ್ದಾರಿಗಳು. ನಾವು ಈ ವಿಷಯಗಳನ್ನು ಕಾರ್ಯಕ್ರಮಗಳಿಗೆ ಸೀಮಿತ ಮಾಡದೆ ಪ್ರತಿದಿನ ಅವರ ಬದುಕಿನ ಭಾಗವಾಗಿ ನೋಡಬೇಕಿದೆ. ಮಕ್ಕಳಿಗೆ ಭಯ ರಹಿತ ವಾತಾವರಣ ನಿರ್ಮಿಸಬೇಕಾದ್ದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ್, ಬಿ.ಗಿರೀಶ್, ಕರವೇ ಪ್ರಧಾನ ಕಾರ್ಯದರ್ಶಿ ಖಾದರ್, ಪೂರ್ಣಪ್ರಜ್ಞಾ ಶಾಲೆ ಪ್ರಾಂಶುಪಾಲ ಪ್ರಶಾಂತ್, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಧರಣೇಶ್ ಇತರರಿದ್ದರು.