- ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ
ಅರಕಲಗೂಡು : ರಾಜ್ಯ ಸರ್ಕಾರ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡದೆ ಕುರ್ಚಿ ಕಿತ್ತಾಟ ನಾಟಕದ ಮೊರೆ ಹೋಗಿರುವ ಪರಿಣಾಮ ನಿರುದ್ಯೋಗ ಸಮಸ್ಯೆಯೂ ಬಿಗಡಾಯಿಸಿದೆ. ಉದ್ಯೋಗಕ್ಕಾಗಿ ಯುವಕರು ಬೀದಿಗಿಳಿಯುವ ಪರಿಸ್ಥಿತಿ ಬಂದೊದಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೊಡಕಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಲಕ್ಷ್ಮೀದೇವಿ, ಮಾರಮ್ಮ ಮತ್ತು ಗ್ರಾಮದೇವತೆ ದೇವಸ್ಥಾನ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪದೇ ಪದೆ ಐದು ಗ್ಯಾರಂಟಿಗಳ ಬಗ್ಗೆಯೇ ಮಾತನಾಡುತ್ತಿದ್ದು ಗ್ಯಾರಂಟಿಗಳಿಂದ ನಾಡು ಬಹಳ ಸುಭಿಕ್ಷವಾಗಿ, ಕುಟುಂಬಗಳು ಉತ್ತಮ ಬದುಕು ನಡೆಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ಉದ್ಯೋಗಕ್ಕಾಗಿ ಯುವಕರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಎಷ್ಟರ ಮಟ್ಟಿಗೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆದಾಗ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಇದೆ ಎಂದು ಹೇಳಿದ್ದರು. ಇವತ್ತು ಅಷ್ಟೇ ಸಿಬ್ಬಂದಿ ಕೊರತೆ ಇದೆ. ಒಳಮೀಸಲಾತಿ ಸಮಸ್ಯೆಯಿಂದ ನೇಮಕ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. 76 ಸಾವಿರ ಶಿಕ್ಷಕರ ಕೊರತೆ ಇದೆ, ಆರೋಗ್ಯ ಇಲಾಖೆ, ಪಶುಸಂಗೋಪನೆ, ಕೃಷಿ ಇಲಾಖೆಯಲ್ಲೂ ನೇಮಕಾತಿಗೆ ಆದ್ಯತೆ ಕೊಡಲಿಲ್ಲ. ಎರಡೂವರೆ ವರ್ಷ ಗ್ಯಾರಂಟಿಗಳ ಹೆಸರಿನಲ್ಲಿ ಕಾಲ ಕಳೆದರು. ಈಗ ಮುಖ್ಯಮಂತ್ರಿ ಕುರ್ಚಿ ಸಮಸ್ಯೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಜರಿದರು.
ಶಾಸಕರು ಕೂಡ ಸಚಿವ ಸ್ಥಾನಕ್ಕೆ ಪ್ರಾಮುಖ್ಯತೆ ಕೊಟ್ಟು ಹೋರಾಟ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಕಿಂಚಿತ್ತು ಗಮನ ಕೊಡುತ್ತಿಲ್ಲ. ಐಎಎಸ್, ಕೆಎಎಸ್ ತರಬೇತಿ ಕೊಡಲು ಧಾರವಾಡದಲ್ಲಿ ದೊಡ್ಡಮಟ್ಟದ ಬಿಲ್ಡಿಂಗ್ ಕಟ್ಟಿಸಿದ್ದಾರೆ. ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡದೆ ಅವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಇದು ಸರ್ಕಾರದ ದೊಡ್ಡ ಕೊಡುಗೆ ಎಂದು ಕುಟುಕಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪೇ ಸಿಎಂ ಆರೋಪ ಮಾಡಿದ್ದರು. ಸರ್ಕಾರ ಕ್ರಮ ತೆಗೆದುಕೊಳ್ಳುವುದಾದರೆ ಯಾರು ಕಮಿಷನ್ ತೆಗೆದುಕೊಂಡಿದ್ದಾರೆ ಹೇಳುತ್ತೇವೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. 40% ಹೇಳಿಕೊಂಡು 136 ಸೀಟ್ ಗೆದ್ದಿದ್ದೀರಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕುರ್ಚಿ ಕದನ ಹಾಗೂ ಶಾಸಕರ ಪತ್ರ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಈಗ ನಡೆಯುತ್ತಿರುವುದು ನೋಡಿದರೆ ಕಾಂಗ್ರೆಸ್ ಹೈಕಮಾಂಡ್ ಇದೆಯೋ ಎಂಬ ಅನುಮಾನವಿದೆ. ಕುರ್ಚಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದೊಂದು ಹೆಸರು ಬರ್ತಿದೆ. ಬಹುಶಃ ಅದ್ಯಾವುದು ಕಾರ್ಯ ರೂಪಕ್ಕೆ ಬರಲ್ಲ. ಡ್ರಾಮಾ ನೋಡಿ ಅಂತ ಹೇಳಿ ಪರದೆ ಮೇಲೆ ನಾಟಕ ಮಾಡಿಕೊಂಡು ಕುಳಿತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರೆಲ್ಲರಿಗೂ ಗೊತ್ತಿದೆ, ದೇಶಪಾಂಡೆ, ರಾಯರೆಡ್ಡಿ ಮೊದಲು ಅದನ್ನೇ ಹೇಳಿದ್ದು, ಈಗ ಅವರಿಗೆ ಸರ್ಕಾರಕ್ಕೆ ಹೊಣೆ ಎಂದು ಜ್ಞಾನೋದಯ ಆಗಿದೆಯಾ? ಎಂದು ಕುಟುಕಿದರು.
ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರ ಕುರಿತು, ನನಗೆ ಅವರ ಪರಿಚಯ ಅಷ್ಟು ಆತ್ಮೀಯವಾಗಿಲ್ಲ. ಷಡ್ಯಂತ್ರ ನಡೆದಿರುವುದು ನಿಜವೇ ಆಗಿದ್ದರೂ ಸರ್ಕಾರ ಸರಿಯಾದ ರೀತಿ ತನಿಖೆ ನಡೆಸಬೇಕು. ಅವರ ಎಸ್‌ಐಟಿ ಬಹಳ ಅದ್ಭುತವಾಗಿ ಕೆಲಸ ಮಾಡುತ್ತಿದ್ದು ಆ ಎಸ್‌ಐಟಿಗೆ ಬಹುಮಾನಗಳನ್ನು ಕೊಡುತ್ತಿದ್ದಾರೆ. ಆ ಎಸ್‌ಐಟಿ ಮುಖಾಂತರ ತನಿಖೆ ನಡೆಸಲಿ ಎಂದು ಹೇಳಿದರು.
ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ಜನಗಳ ಬದುಕು ಸರಿಪಡಿಸಬೇಕು, ನನಗೆ ಈ ಕೆಟ್ಟ ಸರ್ಕಾರ ಹೋಗಬೇಕು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಸಂದರ್ಭ ಬಂದಾಗ ತೀರ್ಮಾನಿಸುವೆ. ನನ್ನ ಆದ್ಯತೆ ಇಂತಹ ಕೆಟ್ಟ ಸರ್ಕಾರ ತೆಗೆಯಬೇಕು, ಅದಕ್ಕಾಗಿ ನಮ್ಮ ಸ್ನೇಹಿತರ ಜತೆ ಮೈತ್ರಿಯಲ್ಲಿ ಹೋರಾಟ ಮಾಡಬೇಕು. ಮುಂದಿನ ಮುಖ್ಯಮಂತ್ರಿ ಅಂತ ಜನಗಳು ಅಭಿಮಾನದಿಂದ ಕೂಗಬಹುದು, ಅದಕ್ಕೆ ನಾವೇನು ಹಿಗ್ಗಬೇಕಿಲ್ಲ, ಅದು ನಮ್ಮ ಕೈಯಲ್ಲಿ ಇಲ್ಲ. ಯಾವುದೋ ಒಂದು ಶಕ್ತಿ ನಮ್ಮನ್ನು ಆಡಿಸುತ್ತಿದೆ. ನಮ್ಮ ಕರ್ತವ್ಯ ನಾವು ಮಾಡಬೇಕು, ಫಲಾಫಲ ದೇವರಿಗೆ ಬಿಡಬೇಕು ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿ ವಿಚಾರದಲ್ಲಿ ಇನ್ನೂ ಯಾವುದೇ ಮಾತುಕತೆ ಮಾಡಿಲ್ಲ. ಎರಡು ಪಕ್ಷಗಳು ಮಾತುಕತೆ ಮಾಡಲು ನಾವೇನು ರಬ್ ಆಗಿಲ್ಲ. ಎರಡು ಕಡೆ ಒಪ್ಪಂದ ಆಗಬೇಕು. ಯಾವ ಸಂದರ್ಭಕ್ಕೆ ಕುಳಿತು ಚರ್ಚೆ ಮಾಡಬೇಕು ಮಾಡುತ್ತೇವೆ ಎಂದರು.
ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಈ ಸರ್ಕಾರದ ಸಾಮರ್ಥ್ಯ ಎಷ್ಟಿದೆ ಎಂಬುದು ಸಾಬೀತಾಗಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಕಮಿಷನ್ ಪಡೆದಿರುವ ಬಗ್ಗೆ ಯಾರೂ ದೂರು ಹೇಳಲಿಲ್ಲ. ನಮ್ಮ ಕಾಲದಲ್ಲಿ ಹಲವಾರು ನೇಮಕಾತಿ ನಡೆದಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿ.ಪಂ., ತಾ.ಪಂ., ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇ ತಿಂಗಳಿನಲ್ಲಿ ಆಗಲೇಬೇಕು. ಏನು ಮಾಡುತ್ತಾರೋ ನೋಡಬೇಕು, ನಾವು ಚುನಾವಣೆಗೆ ಸಿದ್ಧರಿದ್ದು ತಕ್ಕ ಸಿದ್ಧತೆ ಕೂಡ ಮಾಡಲಾಗುತ್ತಿದೆ ಎಂದರು.
ಶಾಸಕ ಎ. ಮಂಜು, ಸೂರಜ್ ರೇವಣ್ಣ, ಸಾ.ರಾ. ಮಹೇಶ್ ಇದ್ದರು.