ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಕಾವ್ಯಶ್ರೀ ಕೃಷ್ಣ, ಸುರೇಶ್, ಚೌಡಯ್ಯ ಪಟ್ನ ವಾಡಿ, ತೇಜಸ್ವಿ ಸ್ವಾಮಿ, ರವಿ ಇದ್ದರು.  
ಹಾಸನ

ಆಕರ್ಷಣೆಗೆ ಬಲಿಯಾಗದೆ ಸಾಧನೆಗೆ ಶ್ರಮಿಸಿ

ಪ್ರಮುಖ ಮುಖ್ಯಾಂಶಗಳು

  • ಹರಿಕಥೆ ವಿದ್ವಾಂಸ ಕಾವ್ಯಶ್ರೀ ಕೃಷ್ಣ ಅಭಿಪ್ರಾಯ
  • ಸಮಾರೋಪ ಸಮಾರಂಭ
ಹೊಳೆನರಸೀಪುರ: ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದ್ದು, ಗ್ರಾಮೀಣ ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಿಕ್ಷಕಿ ಹಾಗೂ ಹರಿಕಥೆ ವಿದ್ವಾಂಸ ಕಾವ್ಯಶ್ರೀ ಕೃಷ್ಣ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡಕಾಡನೂರು ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 2025-26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾಡಿದರು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಇಲ್ಲಿ ಶಿಕ್ಷಣ ಕಲಿಯುವುದೇ ಪುಣ್ಯ. ನುರಿತ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗವಿದೆ. ಇವರ ಅನುಭವದ ಮೂಲಕ ಇಲ್ಲಿನ ವಿದ್ಯಾರ್ಥಿಗಳಲ್ಲಿ ಆತ್ಮಾಭಿಮಾನ ಮತ್ತು ದೇಶಾಭಿಮಾನ ಬೆಳೆಸುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ಯಾರೋ ಹೇಳಿದನ್ನು ಬಾಯಿಪಾಠ ಮಾಡಬಾರದು, ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಭಾರತದ ಮಹಾ ಕಾವ್ಯಗಳು, ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅರಿವಿರಬೇಕು. ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ಹೇಳಿಕೊಡುವ ವಿಷಯಗಳನ್ನು ಕೇಳಿಸಿಕೊಂಡ ಜ್ಞಾನವನ್ನು ಮನನ ಮಾಡಿಕೊಂಡು ಸಮಯ ಸಂದರ್ಭ ಬಂದಾಗ ಉಪಯೋಗಿಸಿಕೊಳ್ಳಬೇಕು. ಯಾವುದೇ ಆಕರ್ಷಣೆಗಳಿಗೆ ಬಲಿಯಾಗದೆ ತಮ್ಮ ಗುರಿಯನ್ನು ಮುಟ್ಟಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಜೆಎಸ್‌ಎಸ್ ಪ್ರೌಢಶಲೆಯ ಮುಖ್ಯ ಶಿಕ್ಷಕ ಸುರೇಶ್, ದೊಡ್ಡಕಾಡನೂರು ಗ್ರಾಮದ ಮುಖಂಡರಾದ ತೇಜುಸ್ವಾಮಿ, ರವಿ ಡಿಎಸ್, ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ, ಉಪನ್ಯಾಸಕ ಸೋಮಣ್ಣ, ರೇಣುಕಾ, ಶಿವಕುಮಾರ್ ಇತರರು ಇದ್ದರು.