ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಶನಿವಾರ ಪಟ್ಟಣ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷಿನ್ ಅಭಿಯಾನದ ವತಿಯಿಂದ ನಡೆದ ಛತ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು ಭಾಗವಹಿಸಿ ಛತ್ರಿ ವಿತರಣೆ ಮಾಡಿದರು.  
ಹಾಸನ

ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಲಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿಮೆಂಟ್ ಮಂಜು ಸಲಹೆ
  • ಛತ್ರಿ ವಿತರಣೆ ಕಾರ್ಯಕ್ರಮ
ಆಲೂರು: ಶ್ರಮಜೀವಿಗಳಾಗಿರುವ ಬೀದಿಬದಿ ವ್ಯಾಪಾರಿಗಳು ಬಿಸಿಲು, ಮಳೆ ಲೆಕ್ಕಿಸದೆ ಸ್ವಾಭಿಮಾನ ಬದುಕು ಕಟ್ಟಿಕೊಂಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವುದು ಅವಶ್ಯ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಶನಿವಾರ ಪಟ್ಟಣ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ನಡೆದ ಛತ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫುಟ್‌ಪಾತ್ ವ್ಯಾಪಾರಿಗಳು ಪಾದಚಾರಿ ಮಾರ್ಗ ಹಾಗೂ ರಸ್ತೆ ಅತಿಕ್ರಮಿಸಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಿ ಎಂಬ ಒತ್ತಡ ನನಗೆ ಬಂತು. ಆದರೆ, ನಿಮ್ಮ ಬದುಕಿಗೆ ತೊಂದರೆಯಾಗದಂತೆ ಮಾನವೀಯತೆ ದೃಷ್ಟಿಯಿಂದ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ವ್ಯಾಪಾರಿಗಳು ಸ್ವಚ್ಛತೆಗೆ ಒತ್ತು ನೀಡಬೇಕು. ತಾವಿರುವ ಜಾಗವನ್ನು ಒತ್ತುವರಿ ಮಾಡಬಾರದು. ಶಾಶ್ವತ ಅಂಗಡಿಯ ಕಟ್ಟಡ ನಿರ್ಮಿಸದೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಬೇಕು. ಅದಕ್ಕಾಗಿ, ವ್ಯಾಪಾರದ ಸ್ಥಳದಲ್ಲಿ ಪಟ್ಟಿ ಹಾಕಲಾಗುತ್ತದೆ. ಅದನ್ನು ಮೀರಿದರೆ ಕ್ರಮ ಖಚಿತ. ಹಾಗಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ವ್ಯಾಪಾರ ನಡೆಸಬೇಕು. ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಹಂತ ಹಂತವಾಗಿ ಹಲವು ಸವಲತ್ತುಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ವ್ಯಾಪಾರಿಗಳು ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಅಲ್ಲಿ ಬೀದಿ ಬದಿ ವ್ಯಾಪಾರಿಗಳು ನಿತ್ಯ ವ್ಯಾಪಾರ ನಡೆಸಲು ಸದ್ಯದಲ್ಲೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ನಾಮ ನಿರ್ದೇಶಕ ಸದಸ್ಯರಾದ ರಮೇಶ್, ನಾಗರಾಜ್ ಕ್ಯಾಂಟೀನ್, ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಅಪ್ಪನ ಕೃಷ್ಣಮೂರ್ತಿ, ನಗರ ಅಧ್ಯಕ್ಷ ಲೋಹಿತ್, ಎಸ್ಸಿ ಮೋರ್ಚಾ ಅಧ್ಯಕ್ಷ ಜೆಸಿಪಿ ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಾವನೂರು ಮೋಹನ್, ಬಿಜೆಪಿ ಮುಖಂಡ ಹೇಮಂತ್, ಹರೀಶ್ ಇತರರಿದ್ದರು.