ಹೊಳೆನರಸೀಪುರ ಪಟ್ಟಣದ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಂದ ಕುಂದು ಕೊರತೆಗಳ ಸಭೆ ಜರುಗಿತು. ಎಸ್ ಪುಟ್ಟಸ್ವಾಮಿ ಮಂಜೇಗೌಡ ಮೋಹನ್ ಕುಮಾರ್ ಪುಟ್ಟೇಗೌಡ ರಾಜೇಗೌಡ ಪುಟ್ಟರಾಜು ಇತರರು ಇದ್ದರು.
ಹೊಳೆನರಸೀಪುರ: ತಾಲೂಕಿನ ದೊಡ್ಡ ಕಾಡನೂರು ಸಮೀಪದ ಕಲ್ಲೋಡೆ ಬೋರೆ ಕಾವಲು ಭೂ ಪ್ರದೇಶದಲ್ಲಿ ತಲೆ ಎತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ಗಳಿಂದ ಈ ಭಾಗದ ಹತ್ತಾರು ಗ್ರಾಮದ ಕುಟುಂಬಗಳು ಅಪಾಯ ಎದುರಿಸುತ್ತಿದ್ದು, ಸರ್ಕಾರ ಕ್ರಷರ್‌ಗಳ ಅನುಮತಿ ರದ್ದುಗೊಳಿಸಬೇಕೆಂದು ತಾಲೂಕಿನ ಕುರುಬ ಸಮಾಜದ ಮುಖಂಡ ಬಿ.ಪಿ. ಮುಂಜೇಗೌಡ ಒತ್ತಾಯಿಸಿದ್ದಾರೆ.
ಕನಕ ಭವನದಲ್ಲಿ ಬುಧವಾರ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಏರ್ಪಡಿಸಿದ್ದ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ದೊಡ್ಡ ಕಾಡನೂರು, ತಾತನಹಳ್ಳಿ ಗ್ರಾಮ ಪಂಚಾಯಿತಿಯ ಸರಹದ್ದಿನ ಕಲ್ಲೋಡೆ ಬೋರೆ ಕಾವಲು ಪ್ರದೇಶದಲ್ಲಿ 5 ಕ್ರಷರ್ ಗಳು ತಲೆಯೆತ್ತಿವೆ. ಸಿ. ಸಿಂದಲಳ್ಳಿ, ಚಿಕ್ಕಕಾಡನೂರು, ದೊಡ್ಡ ಕಾಡನೂರು, ಮೇಣಗನಹಳ್ಳಿ, ದಾಳ ಗೌಡನಹಳ್ಳಿ, ಮೂಡಲ ಕೊಪ್ಪಲು, ಜವರಿ ಕೊಪ್ಪಲು, ತಾತನಹಳ್ಳಿ ಗ್ರಾಮಗಳ ಮಧ್ಯ ಭಾಗದಲ್ಲಿ ವಿಸ್ತರಿಸಿಕೊಂಡಿವೆ. ಕೃಷಿಗೆ ಅನುಕೂಲವಾಗಿದ್ದ ಜಾಗದಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ಗಳಿಗೆ ಅಧಿಕಾರಿಗಳು ನಿಯಮಬಾಹಿರವಾಗಿ ಅನುಮತಿ ನೀಡಿ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಶಬ್ದಕ್ಕೆ ಸುತ್ತಮುತ್ತಲ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ. ಜನರಿಗೆ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ತಕ್ಷಣವೇ ಕ್ರಷರ್‌ಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಹಳ್ಳಿ ಮೈಸೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಗೌಡ ಮಾತನಾಡಿ, ಕ್ರಷರ್ ಮಾಲೀಕರು ಬಡ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಪ್ರಶ್ನೆ ಮಾಡಿದವರ ಮೇಲೆ ದೌರ್ಜನ್ಯ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ರಂಗೇನಹಳ್ಳಿ, ಗುಡ್ಡೆನಹಳ್ಳಿ ಏತ ನೀರಾವರಿ ಘಟಕಗಳಿಗೂ ಕಲ್ಲು ಗಣಿಗಾರಿಕೆಯಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ, ಸಂಸದರಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಪರಿಹಾರ ದೊರೆಯತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲರೂ ಒಗ್ಗಟ್ಟಾಗಿ ಅನ್ಯಾಯದ ವಿರುದ್ಧ ಹೋರಾಡಿ ಬಡಜನರಿಗೆ ನ್ಯಾಯ ಒದಗಿಸಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಎಸ್ ಪುಟ್ಟಸ್ವಾಮಿ, ಯುವ ಮುಖಂಡ ಮೋಹನ್ ಕುಮಾರ್, ಹಳ್ಳಿ ಮೈಸೂರು ಹೋಬಳಿ ಕುರುಬರ ಸಂಘದ ಅಧ್ಯಕ್ಷ ಪುಟ್ಟೇಗೌಡ, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಕೀಲ ಪುಟ್ಟರಾಜು, ವಕೀಲ ಶ್ರೀಧರ್, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ದಾಶರಥಿ, ಕೆಪಿಸಿಸಿ ಸದಸ್ಯ ಹೊನ್ನಿ ಕೊಪ್ಪಲು ಮಂಜೇಗೌಡ, ಲಕ್ಕೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶಾಂತರಾಜು, ಹೇಮಂತ್ ಕುಮಾರ್, ರಾಜೇಗೌಡ, ಸ್ವಾಮಿ ಗೌಡ ಹಾಗೂ ಸಮುದಾಯದ ಮುಖಂಡರು ಇದ್ದರು.