-ತಾಲೂಕಿನ ತಗರೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ನೆರವೇರಿಸುತ್ತಿರುವ ಶಾಸಕ ಎಚ್.ಕೆ.ಸುರೇಶ್
- ಶಾಸಕ ಶಾಸಕ ಎಚ್.ಕೆ.ಸುರೇಶ್ ಅಭಿಮತ
ಬೇಲೂರು: ಸ್ವಾತಂತ್ರ್ಯಾದ ನಂತರವು ಅಭಿವೃದ್ಧಿಯಿಂದ ವಂಚಿತವಾಗಿರುವ ಬೇಲೂರು ಕ್ಷೇತ್ರದಲ್ಲಿರುವ ಕುಗ್ರಾಮಗಳನ್ನು ಗುರುತಿಸಿ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ತಗರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿರುವ ಬಯಲು ಸೀಮೆ ಮತ್ತು ಮಲೆನಾಡು ಭಾಗದ ಹಲವು ಕುಗ್ರಾಮಗಳು ಇನ್ನೂ ಅಗತ್ಯ ಮೂಲಸೌಕರ್ಯಗಳ ಕೊರತೆ ಮತ್ತು ಅಭಿವೃದ್ಧಿಯಿಂದ ವಂಚಿತವಾಗಿದ್ದವು. ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಶಾಸಕನಾದ ನಂತರ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಅಲ್ಲದೆ ತಗರೆ ಗ್ರಾಮದ ಸಂಪರ್ಕ ರಸ್ತೆ ಸಾಕಷ್ಟು ವರ್ಷಗಳಿಂದ ಅಭಿವೃದ್ಧಿ ಕಾಣದೆ ಗುಂಡಿ ಯಿಂದ ಕೂಡಿತ್ತು. ಆದರೆ ಈ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ 35 ಲಕ್ಷ ರೂ, ಅನುದಾನದಲ್ಲಿ 350 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಉಳಿದ ರಸ್ತೆ ಅಭಿವೃದ್ಧಿಗೂ ಶೀಘ್ರದಲ್ಲೇ ಅನುದಾನ ಮಂಜೂರು ಮಾಡಿಸಿ ಕೆಲಸ ಮಾಡಿಸಲಾಗುವುದು. ಮತ್ತು ಇವುಗಳೊಂದಿಗೆ ಈಗಾಗಲೆ ತಾಲೂಕಿನ ಸೋಂಪುರ, ಅಜ್ಜೇನಹಳ್ಳಿ ಸೇರಿದಂತೆ ಅಭಿವೃದ್ಧಿಯಿಂದ ವಂಚಿತವಾಗಿರುವ ಇನ್ನಿತರ ಕುಗ್ರಾಮಗಳಲ್ಲಿಯೂ ಮೂಲಸೌಕರ್ಯ ಅಭಿವೃದ್ಧಿಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಅನುದಾನ ಒದಗಿಸಿ ಕೆಲಸ ಮಾಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮಸ್ಥರಾದ ಸೋಮಶೇಖರ, ಶಿವೇಗೌಡ, ಕಾವ್ಯಾ ರೇವಪ್ಪಗೌಡ, ಪೂರ್ಣಚಂದ್ರ, ಹಾಲಪ್ಪ, ಶಿವರಾಜೇಗೌಡ, ನಟೇಶ್, ನಾಗೇಶ್, ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.