ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಜಯ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ 15ನೇ ವರ್ಷದ ಸಾಂಸ್ಕೃತಿಕ ಹಬ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
- ಶಾಸಕ ಎಚ್.ಕೆ.ಸುರೇಶ್ ಭರವಸೆ
- ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ
ಬೇಲೂರು: ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಬೇಲೂರು-ಹಳೇಬೀಡು ದೇಗುಲಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಒತ್ತಾಯಿಸಿದ್ದಲ್ಲದೆ, ಸದನದಲ್ಲಿ ಖಾಸಗಿ ಬಿಲ್ ಸಹ ಮಂಡಿಸಿದ್ದೆ. ಆದರೆ ಸರ್ಕಾರ ಗಮನ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಸರ್ಕಾರ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಚನ್ನಕೇಶವ ದೇಗುಲದ ಆವರಣದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬುಧವಾರ ಆಯೋಜಿಸಿದ್ದ 15ನೇ ವರ್ಷದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಲೂರಿನಲ್ಲಿ ಎರಡು ದಿನ ನಡೆದ ಶ್ರೀ ಚನ್ನಕೇಶವಸ್ವಾಮಿಯವರ ರಥೋತ್ಸವ ಹಿಂದೆಂದಿಗಿಂತಲೂ ಅದ್ದೂರಿಯಾಗಿ ನೆರವೇರಿದೆ. ಇದಕ್ಕೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ. 900 ವರ್ಷಗಳ ಇತಿಹಾಸವನ್ನು ಹೊಂದಿರುವ ಬೇಲೂರು-ಹಳೇಬೀಡು ದೇಗುಲಗಳ ಅಭಿವೃದ್ಧಿಗಾಗಿ ಸದನದಲ್ಲಿ ಮತ್ತೆ ಸರ್ಕಾರದ ಗಮನ ಸೆಳೆಯುವುದಲ್ಲದೆ, ಕ್ಷೇತ್ರದ ಅಭಿವೃದ್ಧಿಗೂ ಮುಂದಾಗಲಿದ್ದೇನೆ ಎಂದರು.
ಜಯಕರ್ನಾಟಕ ಸಂಘಟನೆಯಿಂದ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಹಾಸನದ ಹೇಮಾವತಿ ಪ್ರತಿಮೆ ಬಳಿ 5 ದಿನಗಳ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಾನೂ ಸಹ ಸದನದಲ್ಲಿ ಒತ್ತಾಯಿಸಿದ್ದೆ. ಮುಂದಿನ ದಿನಗಳಲ್ಲಿ ಸಂಘಟನೆ ಇನ್ನೂ ಉತ್ತಮ ಕೆಲಸ ಮಾಡಲಿ ಎಂದರು.
ಜಯಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಜತ್ ಗಗನ್ ರಾಜ್ ಮಾತನಾಡಿ, ಶ್ರೀ ಚನ್ನಕೇಶವಸ್ವಾಮಿ ದೇಗುಲ ಶಿಲ್ಪಕಲೆಯೊಂದಿಗೆ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಮ್ಮನ್ನು ಪುಳಕಿತಗೊಳಿಸಿದೆ. ನಮ್ಮ ಸಂಘಟನೆ ನಾಡು ನುಡಿ, ನೆಲ ಜಲ ಪರವಾದ ಮತ್ತು ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಾಗಿದೆ. ಬೇಲೂರಿನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ 15ನೇ ವರ್ಷದ ಸಾಂಸ್ಕೃತಿಕ ಹಬ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿದ ಗಣ್ಯರನ್ನು ಸನ್ಮಾನಿಸಿದ್ದು, ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಮಾತನಾಡಿ, ಸಂಘಟನೆ ಹಲವಾರು ಉತ್ತಮ ಕೆಲಸದೊಂದಿಗೆ ಹೋರಾಟ ಮಾಡುತ್ತಾ ಸರ್ಕಾರದ ಗಮನ ಸೆಳೆಯುತ್ತಿದೆ. ಜತೆಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಕಲಾ ಭವನದ ಅವಶ್ಯಕತೆ ಇದ್ದು ಶಾಸಕರು ಗಮನ ಹರಿಸಬೇಕು. ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದರು.
ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ನಮ್ಮ ಸಂಘಟನೆಯಿಂದ ಸಾರ್ವಜನಿಕರ ಪರವಾದ ಸಾಕಷ್ಟು ಹೋರಾಟ ಮಾಡಿದ್ದೇವೆ. ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಹಬ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ, ಸನ್ಮಾನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸುವ ಗುರಿ ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ನಿವೃತ್ತ ಸೈನಿಕ ಹಾಗೂ ಪ್ರಗತಿಪರ ರೈತ ಜಿ.ಬಿ.ವೆಂಕಟೇಶಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ, ಪ್ರಗತಿಪರ ರೈತ ಹೊಸಳ್ಳಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಜಯ ಕರ್ನಾಟಕ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಎಂ.ಕೆ.ಆರ್ ಸೋಮೇಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಕಾಂಗ್ರೆಸ್ ಮುಖಂಡ ಬಿ.ಎಂ.ಸಂತೋಷ್, ಅರ್ಬನ್ ಬ್ಯಾಂಕ್ ನಿರ್ದೇಶಕ ಎಸ್.ಕೆ.ನಾಗೇಶ್, ಕಾರ್ಯಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷರಾದ ಮೀಸೆ ವಸಂತ್, ಗುರುಮೂರ್ತಿ, ಯುವ ಘಟಕದ ಅಧ್ಯಕ್ಷ ಹೇಮಂತ್, ನಗರಾಧ್ಯಕ್ಷ ಜಯರಾಂ, ಆಟೋ ಲಕ್ಷ್ಮಣ್, ಸತೀಶ್ ಸೇರಿದಂತೆ ಇತರರಿದ್ದರು.