ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 
ಹಾಸನ

ಆರೋಗ್ಯಕರ ಜೀವನಕ್ಕಾಗಿ ದುಶ್ಚಟಗಳಿಂದ ದೂರವಿರಿ

ಅರಕಲಗೂಡು:

ತಾಲೂಕಿನ ಮಲ್ಲಿಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಇತ್ತೀಚೆಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯದಲ್ಲೇ ಮಕ್ಕಳು ಆಕರ್ಷಿತರಾಗುವ ದುಶ್ಚಟಗಳು, ಮನೆಯಲ್ಲಿನ ಕೆಟ್ಟ ವಾತಾವರಣದಿಂದ ಅವರ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಬೆಳೆಯುತ್ತಾ ದುಶ್ಚಟಗಳಿಗೆ ಒಳಗಾಗುವ ಸಾಧ್ಯತೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕಿ ಮಮತಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಳ್ಳುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸ್ವಾಸ್ಥ್ಯ ಸಂಕಲ್ಪವೂ ಪ್ರಮುಖವಾದುದು. ಸಮಾಜ ಸುಧಾರಣೆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಉತ್ತಮ ಪರಿಣಾಮ ಬೀರುತ್ತವೆ ಎಂದರು.
ಸಂಸ್ಥೆಯ ವಲಯ ಮೇಲ್ವಿಚಾರಕಿ ಪ್ರೇಮಾ, ಸೇವಾಪ್ರತಿನಿಧಿ ಚೇತನಾ, ಶಿಕ್ಷಕರು ಇದ್ದರು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.