- ‘ಎಸ್ಸೆಸ್ಸೆಲ್ಸಿ’ ಹಾಸನಕ್ಕೆ 4ನೇ ಸ್ಥಾನ
- ಜಿಲ್ಲೆಗೆ ಶೇ.97.51 ಫಲಿತಾಂಶ
- ಸುಮೇಧ ಮೌರ್ಯ ಜಿಲ್ಲಾ ಟಾಪರ್
ಹಾಸನ: ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಶೇ.97.51 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಟಾಪ್ 4 ಸ್ಥಾನ ಪಡೆದಿದೆ.
ಕಳೆದ ವರ್ಷ ಶೇ.82.12 ಫಲಿತಾಂಶದೊಂದಿಗೆ 6ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಶೇ.15ಕ್ಕೂ ಹೆಚ್ಚು ಏರಿಕೆ ಕಂಡು ಟಾಪ್-5ರಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಈ ಬಾರಿ ಜಿಲ್ಲೆಯಿಂದ ಪರೀಕ್ಷೆಗೆ ಹಾಜರಾದ 19,041 ವಿದ್ಯಾರ್ಥಿಗಳ ಪೈಕಿ 18,566 ಜನ ಉತ್ತೀರ್ಣರಾಗಿದ್ದಾರೆ. ಉಳಿದ 475 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದು, 9,618 ವಿದ್ಯಾರ್ಥಿನಿಯರ ಪೈಕಿ 9,481 ಉತ್ತೀರ್ಣರಾಗಿದ್ದಾರೆ. ಹುಡುಗರ ತೇರ್ಗಡೆ ಪ್ರಮಾಣ ಶೇ.96.41 ಆಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ. 97.96 ಫಲಿತಾಂಶದೊಂದಿಗೆ ನಗರ ಪ್ರದೇಶದ ಶೇ.96.66 ಗಿಂತ ಮುಂದಿದ್ದಾರೆ.
ಆಡಳಿತವಾರು ಸಾಧನೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಶೇ.99.46 ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿವೆ. ಸರ್ಕಾರಿ ಶಾಲೆಗಳು ಶೇ.97.62 ಹಾಗೂ ಅನುದಾನಿತ ಶಾಲೆಗಳು ಶೇ.94.68 ಸಾಧನೆ ಮಾಡಿವೆ. ಜಿಲ್ಲೆಯ ಒಟ್ಟು 536 ಪ್ರೌಢಶಾಲೆಗಳ ಪೈಕಿ 265 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಇದರಲ್ಲಿ 146 ಸರ್ಕಾರಿ, 26 ಅನುದಾನಿತ ಹಾಗೂ 86 ಖಾಸಗಿ ಶಾಲೆಗಳು ಸೇರಿವೆ.
ಆಲೂರಿನ ಬೆಥೆಸ್ದಾ ಆಂಗ್ಲ ಮಾಧ್ಯಮ ಶಾಲೆಯ ಬಿ.ಎಸ್.ಸುಮೇಧಾ ಮೌರ್ಯ 623/625 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಅರಕಲಗೂಡಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೆ.ಆರ್.ಸನಾ, ಹಾಸನದ ಬ್ರಿಲಿಯಂಟ್ ಪಬ್ಲಿಕ್ ಸ್ಕೂಲ್‌ನ ಎಚ್.ಆರ್.ಚರಿತ್ರಾ, ಯುನೈಟೆಡ್ ಹೈಸ್ಕೂಲ್‌ನ ಯು.ಕೆ.ನಿರೂಪ್ ಬಾಬು ಹಾಗೂ ವಿಜಯ ಶಾಲೆಯ ಪುಣ್ಯ ಆರ್ ತಲಾ 622 ಅಂಕ ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 475 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಹಾಸನ ತಾಲ್ಲೂಕೊಂದರಲ್ಲೇ 149 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
ತಾಲೂಕುವಾರು ಫಲಿತಾಂಶದಲ್ಲಿ ಸಕಲೇಶಪುರ ಶೇ.99.17 ದೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದರೆ, ಚನ್ನರಾಯಪಟ್ಟಣ ಶೇ.98.22 ದೊಂದಿಗೆ ದ್ವಿತೀಯ, ಆಲೂರು ಶೇ. 98.12 ದೊಂದಿಗೆ ತೃತೀಯ ಸ್ಥಾನದಲ್ಲಿವೆ. ಹಾಸನ ತಾಲೂಕು ಶೇ.96.67 ಫಲಿತಾಂಶ ದಾಖಲಿಸಿದೆ. ವಿಷಯವಾರು ಫಲಿತಾಂಶದಲ್ಲಿ ದ್ವಿತೀಯ ಭಾಷೆ ಶೇ.99.52 ದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸಮಾಜ ವಿಜ್ಞಾನ ಶೇ. 98.74 ಕನಿಷ್ಠ ಸಾಧನೆ ತೋರಿದೆ. ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು ಶೇ.98.73, ಕನ್ನಡ ಮಾಧ್ಯಮ ಶೇ.95.61 ಫಲಿತಾಂಶ ಪಡೆದಿದ್ದಾರೆ. ಂ+ ಗ್ರೇಡ್ 11.49% ವಿದ್ಯಾರ್ಥಿಗಳು ಪಡೆದಿದ್ದು, ಕೇವಲ ಶೇ.2.49 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ.
ಅಂಚೆ ನೌಕರನ ಮಗನ ಅದ್ಭುತ ಸಾಧನೆ
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಹಾಸನ ಜಿಲ್ಲೆಗೆ ಹೆಮ್ಮೆ ತರುವಂತಹ ಸಾಧನೆಯನ್ನು ವಿದ್ಯಾರ್ಥಿ ಸುಮೇಧ ಮೌರ್ಯ ದಾಖಲಿಸಿದ್ದಾನೆ. 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿರುವ ಸುಮೇಧ, ಹಾಸನ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಾಗೂ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.
ಆಲೂರು ತಾಲೂಕು ಬೈರಾಪುರದಲ್ಲಿರುವ ಬೆಥೆಸ್ಥಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಸುಮೇಧ ಮೌರ್ಯ, ತನ್ನ ಪ್ರತಿಭೆ ಮತ್ತು ಶ್ರಮದ ಮೂಲಕ ಈ ಅಪೂರ್ವ ಸಾಧನೆ ಸಾಧಿಸಿದ್ದಾನೆ. ಆಲೂರು ತಾಲೂಕಿನ ಬಾವಸವಳ್ಳಿ ಗ್ರಾಮದ ನಿವಾಸಿ ಹಾಗೂ ಹಾಸನದ ಮುಖ್ಯ ಅಂಚೆ ಕಚೇರಿಯಲ್ಲಿ ನೌಕರರಾಗಿರುವ ಬಿ.ಆರ್.ಶಿವಣ್ಣ ಮತ್ತು ಜಯಂತಿ ದಂಪತಿಯ ಪುತ್ರನಾಗಿರುವ ಸುಮೇಧ ಮೌರ್ಯ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ತಲಾ 100ರಲ್ಲಿ 99 ಅಂಕಗಳನ್ನು ಗಳಿಸಿದ್ದು, ಉಳಿದ ಎಲ್ಲ ವಿಷಯಗಳಲ್ಲಿ ಶೇ.100ರಷ್ಟು ಅಂಕಗಳನ್ನು ಪಡೆದಿದ್ದಾನೆ.
ಮಗನ ಈ ಯಶಸ್ಸಿಗೆ ತಂದೆ-ತಾಯಿ ಶಿವಣ್ಣ ಮತ್ತು ಜಯಂತಿ ದಂಪತಿ ಅಪಾರ ಸಂತೋಷ ವ್ಯಕ್ತಪಡಿಸಿದ್ದು, ನಮ್ಮ ಮಗನ ಪರಿಶ್ರಮದ ಫಲವೇ ಇದು. ಅವನಿಗೆ ಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದೇವೆ. ಅವನು ಇನ್ನೂ ದೊಡ್ಡ ಸಾಧನೆ ಮಾಡಲಿ ಎಂದು ಆಶಿಸಿದ್ದಾರೆ. ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಕೂಡ ಸುಮೇಧನ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದು, ಅವನ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಯೊಬ್ಬ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ. ಸುಮೇಧನ ಈ ಸಾಧನೆ ಹಾಸನ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬುವಂತಾಗಿದೆ.
ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ ಸುಮೇಧ ಮೌರ್ಯ ಅವರನ್ನು ಶಾಸಕ ಸಿಮೆಂಟ್ ಮಂಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.