ಬೇಲೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು. ಉಷಾ ಸತೀಶ್, ಡಾ.ಅನುಪಮಾ ಶೆಟ್ಟಿ, ಸುರೇಶ್ ಮೊಯ್ಲಿ, ಮಂಜುಳಾ, ಸೋಮಣ್ಣ ಇತರರು ಇದ್ದರು.
- ಶಾಸಕ ಎಚ್.ಕೆ.ಸುರೇಶ್ ಅಭಿಮತ
- ಮಹಿಳೆಯರಲ್ಲಿ ಆರೋಗ್ಯ ಬದಲಾವಣೆ ವಿಚಾರಗೋಷ್ಠಿ
ಬೇಲೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಬದುಕನ್ನು ಆರ್ಥಿಕವಾಗಿ ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸ್ತನ ಕ್ಯಾನ್ಸರ್ ಮತ್ತು ವಯಸ್ಕ ಮಹಿಳೆಯರಲ್ಲಿ ಋತುಚಕ್ರ ನಿಂತ ನಂತರ ಕಂಡು ಬರುವ ಆರೋಗ್ಯ ಬದಲಾವಣೆಗಳ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಪುಷ್ಪಗುಚ್ಛ ಸ್ಪರ್ಧೆ, ಆಟೋಟ ಸ್ಪರ್ಧೆ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯೋಜನೆ ಗ್ರಾಮಗಳಲ್ಲಿನ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದು ದೇಶಕ್ಕೆ ಮಾದರಿಯಾಗಿದೆ. ಬೇಲೂರು ತಾಲೂಕಿನಲ್ಲಿ ಮಹಿಳೆಯರು, ಯುವಕರು, ರೈತರು ಈ ಸಂಸ್ಥೆಯ ಯೋಜನೆಯಡಿ ಸಿಗುವ ಅವಕಾಶ ಬಳಸಿಕೊಂಡು ಅಭಿವೃದ್ಧಿಯಾಗಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಯೋಜನೆಯಿಂದ ಗ್ರಾಮ ಮತ್ತು ಪಟ್ಟಣಗಳ ಅಭಿವೃದ್ಧಿಗೆ ನಿಂತಿರುವ ಶಕ್ತಿ ಕೇಂದ್ರವಾಗಿದೆ. ಮಹಿಳಾ ಸಬಲೀಕರಣ, ಕುಟುಂಬದ ಸ್ವಾವಲಂಬನೆ, ಜ್ಞಾನ ವಿಕಾಸ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕಾಗಿ ನೀಡುತ್ತಿರುವ ಸೇವೆ ಪ್ರಶಂಸನೀಯ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯೋಜನೆ ಸಕಾರಾತ್ಮಕ ಬದಲಾವಣೆ ತರುತ್ತಿದೆ. ಗ್ರಾಮಗಳಲ್ಲಿರುವ ಪ್ರತಿಯೊಂದು ಕುಟುಂಬ ಹಾಗೂ ವ್ಯಕ್ತಿಯ ಸಮಗ್ರ ಅಭಿವೃದ್ಧಿಯೇ ಯೋಜನೆಯ ಪ್ರಮುಖ ಧ್ಯೇಯ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಕೈಗೊಳ್ಳುತ್ತಿರುವ ಉದ್ಯಮಗಳು ಕುಟುಂಬದ ಆರ್ಥಿಕತೆಗೆ ಹೊಸ ಬಲ ತಂದಿದೆ ಎಂದು ತಿಳಿಸಿದರು.
ಜ್ಞಾನವಿಕಾಸದಡಿ ನಡೆಯುತ್ತಿರುವ ಮಕ್ಕಳ, ಮಹಿಳೆಯರ ಹಾಗೂ ಯುವಕರ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮತ್ತು ಮೌಲ್ಯವರ್ಧನಕ್ಕೆ ಕಾರಣವಾಗಿದೆ. ಮಹಿಳೆಯರನ್ನು ಕೇವಲ ಸಂಘಗಳಲ್ಲಿ ಸೇರ್ಪಡೆ ಮಾಡುವುದಲ್ಲ, ಅವರನ್ನು ಸ್ವತಂತ್ರವಾದ ನಿರ್ಧಾರಗಳಿಗೆ, ಉದ್ಯಮಗಳಿಗೆ ಮತ್ತು ಸಮಾಜಮುಖಿ ನಾಯಕತ್ವಕ್ಕೆ ತರುವುದಾಗಿದೆ ಎಂದು ತಿಳಿಸಿದರು.
ಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಪಮಾ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಜಾಗೃತಿಯೇ ಇದನ್ನು ತಡೆಗಟ್ಟುವ ಮೊದಲ ಹಂತವಾಗಿದೆ. ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಶೇ.90ರಷ್ಟು ಚಿಕಿತ್ಸೆ ಯಸ್ವಿಯಾಗುತ್ತದೆ. ಆದಕ್ಕಾಗಿ ಪ್ರತಿಯೊಬ್ಬ ಮಹಿಳೆಯೂ ತಿಂಗಳಲ್ಲಿ ಒಮ್ಮೆ ಸ್ವಯಂ ಸ್ತನ ಪರಿಶೀಲನೆ ಮಾಡುವುದು ಅಗತ್ಯ ಎಂದು ಸಲಹೆ ನೀಡಿದರು.
ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುಳಾ, ಸಂಸ್ಥೆಯ ಸೋಮಣ್ಣ ಇತರರು ಇದ್ದರು.